

ಮುದಗಲ್: ತ್ಯಾಗ ಮನೋಭಾವ ಜೀವನದ ಮೋಕ್ಷ ಹಾಗೂ ಮುಕ್ತಿ ಮಾರ್ಗಕ್ಕೆ ಸೋಪಾನವಾಗಲಿದೆ ಎಂದು ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ ಅಭಿಪ್ರಾಯ ಪಟ್ಟರು.
ರಾಯಚೂರಿನ ದಿಲೀಪ್ ಢೋಕಾ ಅವರು ಜೂ. 11ರಂದು ಸನ್ಯಾಸ ದೀಕ್ಷೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಜೈನ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾನ್ನಿದ್ಯ ವಹಿಸಿ ಆಶೀರ್ವಚನ ನೀಡಿದರು.
ರಾಯಚೂರು ಮೂಲದ ದಿಲೀಪ್ ಢೋಕಾ ಅವರು ಸಾಂಸಾರಿಕ ಜೀವನಕ್ಕೆ ವಿದಾಯ ಹೇಳಿ ಜೈನ ಸನ್ಯಾಸ ದೀಕ್ಷೆ ಪಡೆದು ಆತ್ಮ ಶುದ್ಧಿ ಮತ್ತು ಜೀವನದ ಪರಮಸತ್ಯ ಅರಿಯಲು ಮುಂದಾಗಿದ್ದಾರೆ. ಜೈನ ಧರ್ಮದ ಕಟು ವ್ರತಗಳನ್ನು ಈಗಾಗಲೇ ಪೂರೈಸಿ ವೈರಾಗ್ಯ ಮೂರ್ತಿಗಳಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಸಾಂಸಾರಿಕ ಜೀವನ ತೊರೆದು ಮುಮುಕ್ಷುಗಳಾಗಿ ಪರಿವರ್ತನೆಯಗಲಿದ್ದಾರೆ ಎಂದರು.
ಪ್ರಮುಖರಾದ ಶೀತಲ್ ಜೈನ್ ಮಾತನಾಡಿ, ಮೂಲತಃ ಆಗರ್ಭ ಶ್ರೀಮಂತ ಮನೆತನದವರಾದ ದಿಲೀಪ್ ಅವರು ಒಂಬತ್ತು ಭಾಷೆಗಳಲ್ಲಿ ಪಾರಂಗತರಾಗಿದ್ದಾರೆ. ಮಡದಿ, ಮಕ್ಕಳು, ಆಸ್ತಿ ಪಾಸ್ತಿ ಹಾಗೂ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಔಷಧ ಉತ್ಪಾದನಾ ಘಟಕವನ್ನು ಕೂಡ ಸಹೋದ್ಯೋಗಿ ಮಿತ್ರರಿಗೆ ಹಸ್ತಾಂತರ ಮಾಡಿರುವುದು ಶ್ಲಾಘನೀಯ ಎಂದರು.
ದಿಲೀಪ್ ಅವರನ್ನು ಜೈನ ಸಮುದಾಯದಿಂದ ಸನ್ಮಾನಿಸಲಾಯಿತು. ಪ್ರಮುಖ ಸುರೇಶ ಸೇಠ ಜಾಂಗಡಾ, ಪುರಸಭೆ ಮುಖ್ಯಾಧಿಕಾರಿ ಪ್ರವೀಣ, ಹನುಮಂತಪ್ಪ ಕಂದಗಲ್, ಅಶೋಕಗೌಡ ಪಾಟೀಲ್, ಅಭಿ ಬಯ್ಯಪುರ, ಮಹಾಂತೇಶ ಪಾಟೀಲ್, ಚೇತನ್ ಕುಮಾರ್ ಬಾಗಲಕೋಟೆ, ಷಣ್ಮುಖಪ್ಪ ಚಲುವಾದಿ, ಸುರೇಶ ತಾವರಗೇರಾ ಇತರರಿದ್ದರು.