ತಮಿಳುನಾಡಿನ ಕುಂಚಿಟಿಗರು ಕನ್ನಡಿಗರೇ

ce434451-9760-4d05-bdf8-968b641bbd13-05
Published on

ಚಿತ್ರದುರ್ಗ: ತಮಿಳುನಾಡಿನಲ್ಲಿರುವ ಕುಂಚಿಟಿಗರು ಕನ್ನಡಿಗರೇ ಆಗಿದ್ದು, ಭಾಷೆ ಮರೆತವರಿಗೆ ಕಲಿಸುವ ಮೂಲಕ ಕನ್ನಡಾಭಿಮಾನ ಸದಾ ಜೀವಂತವಾಗಿರುವಂತೆ ನೋಡಿಕೊಳ್ಳೋಣ ಎಂದು ಸಮುದಾಯದ ಮುಖಂಡ ರಾಮಸ್ವಾಮಿ ಅಳಗೇಷನ್ ಸಲಹೆ ನೀಡಿದರು.

ಜಿಲ್ಲಾ ಕುಂಚಿಟಿಗ ಸಂಘ, ಮದಕರಿಪುರ ಗ್ರಾಮದ ಕುಂಚಿಟಿಗ ಸಮುದಾಯ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕದಿಂದ ತಮಿಳುನಾಡಿಗೆ ಸಮುದಾಯದ ಅನೇಕರು ಶತಮಾನಗಳ ಹಿಂದೆಯೇ ಹೊಟ್ಟೆಪಾಡಿಗಾಗಿ ವಲಸೆ ಹೋಗಿದ್ದಾರೆ. ಆದರೂ ಮಾತೃ ಭಾಷೆ ಇಂದಿಗೂ ಕನ್ನಡವಾಗಿದೆ ಎಂದರು.

ಎರಡೂ ರಾಜ್ಯಗಳ ಕುಂಚಿಟಿಗರಲ್ಲೂ 48 ಕುಲಗೋತ್ರಗಳಿವೆ. ಆದರೆ, ಹೆಚ್ಚಿನ ಜನಸಂಖ್ಯೆ ತಮಿಳುನಾಡಿನಲ್ಲಿದೆ. ಆದ್ದರಿಂದ ವಿವಾಹಗಳ ಮೂಲಕ ಸಂಬಂಧ ಬೆಸೆಯುವ ಕೆಲಸವಾಗಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಸಂಬಂಧ ಮಾತ್ರವಲ್ಲ, ಕನ್ನಡ ಭಾಷೆ ಮರೆಯುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ಹಲವರು ಬದುಕು ಕಟ್ಟಿಕೊಂಡಿರಬಹುದು. ಆದರೆ, ಮನೆ ದೇವರು, ಅಮಾವಾಸ್ಯೆ ದೇವತೆಗಳು ಕರ್ನಾಟಕದ ತುಮಕೂರು, ಚಿತ್ರದುರ್ಗ, ಹಾವೇರಿ ಇತರೆ ಜಿಲ್ಲೆಗಳಲ್ಲಿದ್ದು, ಪ್ರತಿ ಎರಡ್ಮೂರು ವರ್ಷಗಳಿಗೆ ಒಮ್ಮೆಯಾದರೂ ಐದಾರು ಬಸ್‌ಗಳಲ್ಲಿ ಬಂದು ಹೋಗುತ್ತಿದ್ದೇವೆ. ಅದೇ ರೀತಿ ನೀವುಗಳು ಬಂದರೆ ತಮಿಳುನಾಡಿನ ಕುಂಚಿಟಿಗರ ಆಚಾರ-ವಿಚಾರ, ಸಂಸ್ಕೃತಿ ಅರಿಯಲು ಸಹಕಾರಿಯಾಗಲಿದೆ ಎಂದರು.

ಮುಖಂಡ ಸುಭಾಷ್ ಮಾತನಾಡಿ, ಜ.17ರಂದು ತಮಿಳುನಾಡು ಬಿಟ್ಟಿದ್ದು, ಇನ್ನೂ ಎರಡು ದಿನ ತುಮಕೂರು, ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದೇವೆ ಎಂದು ಹೇಳಿದರು.

ಕುಂಚಿಟಿಗ ಸಂಘದ ಜಿಲ್ಲಾಧ್ಯಕ್ಷ ಜಿ.ಚಂದ್ರಯ್ಯ, ಪ್ರಧಾನ ಕಾರ್ಯದರ್ಶಿ ಹೆಂಜಾರಪ್ಪ, ತಮಿಳುನಾಡಿನ ರಂಜಿತಮ್ಮ, ನಿವೃತ್ತ ಶಿಕ್ಷಕ ಎಂ.ಆರ್.ದಾಸೇಗೌಡ, ಜಯಣ್ಣ, ಮುಖ್ಯಶಿಕ್ಷಕ ಕೆ.ಮಂಜುನಾಥ್, ಶ್ವೇತೇಶ್‌ಕುಮಾರ್, ದ್ಯಾಮಣ್ಣ, ಡಾ.ಕೆ.ಆರ್.ದೇವರಾಜ್, ಎಚ್.ದರ್ಶನ್, ಮಲ್ಲಣ್ಣ, ಎಂ.ವಿ.ರಂಗಸ್ವಾಮಿ ಇತರರಿದ್ದರು.

*ಕೋಟ್

ಹಂಪಿ, ಹೊಸಪೇಟೆ, ಕೂಡ್ಲಿಗಿ, ಚಿತ್ರದುರ್ಗ, ಯರಬಳ್ಳಿ, ಮಾರಿಕಣಿವೆ, ಕುಂದಲಗುರ, ಹಿರಿಯೂರು, ಹರಿಯಬ್ಬೆ, ಶಿರಾ, ತುಮಕೂರು, ಹೀಗೆ ಹಲವು ಪ್ರದೇಶಗಳಲ್ಲಿ ಮನೆ ದೇವರುಗಳಿದ್ದು, ದರ್ಶನಕ್ಕಾಗಿ ಪ್ರವಾಸ ಕೈಗೊಂಡಿದ್ದೇವೆ.

ಮುರುಗನ್ ತಮಿಳುನಾಡು

*ಕೋಟ್

ತಮಿಳುನಾಡಿನಿಂದ ಸಮುದಾಯದವರು ಎಷ್ಟೇ ಸಂಖ್ಯೆಯಲ್ಲಿ ಕೋಟೆನಾಡಿಗೆ ಬಂದರೂ ವಸತಿ ಸೇರಿ ಅಗತ್ಯ ಸೌಕರ್ಯ ಮಾಡಿಕೊಡಲಾಗುವುದು.

ತೇಜಸ್‌ಕುಮಾರ್

ಕಲ್ಯಾಣ ಮಂಟಪದ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net