ಕೆಟಿಪಿಪಿ ಕಾಯ್ದೆಗೆ ತಿಲಾಂಜಲಿ:ಕೋಟೇಷನ್​ಗೆ ಮಣೆ

Ktpp
Published on

ಬೆಂಗಳೂರು: ರಾಜ್ಯದ ಹಲವು ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ನಿಯಮವನ್ನು ಪಾಲಿಸುತ್ತಿಲ್ಲ.

ಬಳ್ಳಾರಿಯ ವಿಮ್ಸ್​, ಮೈಸೂರಿನ ಕೆ.ಆರ್​.ಆಸ್ಪತ್ರೆ, ಬೀದರ್​ ಮೆಡಿಕಲ್​ ಕಾಲೇಜು, ಹುಬ್ಬಳ್ಳಿ ಮೆಡಿಕಲ್​ ಕಾಲೇಜು, ಬೆಂಗಳೂರು ವೈದ್ಯಕಿಯ ಕಾಲೇಜು ಸೇರಿ ಹೊಸದಾಗಿ ಆರಂಭವಾಗಿರುವ ಮೆಡಿಕಲ್​ ಕಾಲೇಜು, ಆಸ್ಪತ್ರೆಗಳು ಕೆಟಿಪಿಪಿ ಕಾಯ್ದೆ ಬದಲು ನಿಯಮಬಾಹಿರವಾಗಿ ಕೋಟೋಷನ್​ ಮೂಲಕ ಹತ್ತಾರು ಕೋಟಿ ರೂ.ವೆಚ್ಚದಲ್ಲಿ ವಿವಿಧ ಔಷಧ, ಉಪಕರಣ ಖರೀದಿಸುತ್ತಿವೆ. ತುರ್ತು ಪರಿಸ್ಥಿತಿಯಲ್ಲಿ ಅತಿ ಅವಶ್ಯಕತೆ ಇದ್ದಾಗ, ಸತತವಾಗಿ ಟೆಂಡರ್​ ವಿಳಂಬವಾದರೆ ಕೋಟೇಷನ್​ ಮೂಲಕ ಒಂದು ಲಕ್ಷ ರೂ.ಒಳಗಿನ ಔಷಧ ಖರೀದಿಸಲು ಅವಕಾಶವಿದೆ. ಟೆಂಡರ್​ ಮೌಲ್ಯ ಒಂದು ಲಕ್ಷ ರೂ. ದಾಟಿದರೆ ಕೆಟಿಪಿಪಿ ಕಾಯ್ದೆಯಂತೆ ಆನ್​ಲೈನ್​ನಲ್ಲಿ ಟೆಂಡರ್​ ನಡೆಸಿ ಅತಿ ಕಡಿಮೆ ಮೊತ್ತಕ್ಕೆ ಬಿಡ್​ ಸಲ್ಲಿಸಿದವರಿಗೆ ಕಾರ್ಯಾದೇಶ ಪತ್ರ ನೀಡಬೇಕು. ಆದರೆ, ಹಲವು ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳು, ಕೆಟಿಟಿಪಿ ನಿಯಮ ಪಾಲಿಸದೆ ಕಮಿಷನ್​ ಆಸೆಗಾಗಿ ಅರ್ಹತೆ ಇಲ್ಲದ ಕಂಪನಿಗಳಿಗೆ ಕಾರ್ಯಾದೇಶ ಪತ್ರ ನೀಡುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ.

ಸಿಂಡಿಕೇಟ್​ ರಚನೆ

ರಾಜ್ಯದ ಕೆಲ ವೈದ್ಯಕಿಯ ಕಾಲೇಜುಗಳಲ್ಲಿ ಜಾಗದ ಕೊರತೆ ಇದ್ದರೂ ಸರಬರಾಜು ಮಾಡಿರುವ ಉಪಕರಣಗಳನ್ನು ಅಳವಡಿಸಲು ಈಗಾಗಲೇ ಜಾಗವಿಲ್ಲದೆ ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಹೀಗಿರುವಾಗ, ಆಯಾ ಜಿಲ್ಲೆಗಳಲ್ಲಿರುವ ಮೆಡಿಕಲ್​ ಕಾಲೇಜುಗಳ ನಿರ್ದೇಶಕರಿಗೆ ನೇರವಾಗಿ ಕರೆ ಮಾಡುವ ಕೆಲವರು, ಸಚಿವರ ಹೆಸರು ಹೇಳಿಕೊಂಡು ಕೋಟೇಷನ್​ ಮೂಲಕ ತಮಗೆ ಟೆಂಡರ್​ ನೀಡುವಂತೆ ಬೆದರಿಕೆ ಹಾಕುತ್ತಿರುವ ಬಗ್ಗೆ ದೂರುಗಳಿವೆ. ಇದಕ್ಕಾಗಿ ಕೆಲವರು ಸಿಂಡಿಕೇಟ್​ ರಚಿಸಿಕೊಂಡು ಕೋಟೇಷನ್​ ಮೂಲಕ ವರ್ಕ್​ ಆರ್ಡರ್​ ಪಡೆಯುತ್ತಿದ್ದಾರೆ. ಈ ದಂಧೆಗೆ ಕೆಲ ಮೆಡಿಕಲ್​ ಕಾಲೇಜು ನಿರ್ದೇಶಕರು ಒಳಗೊಳಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಬಗ್ಗೆ ಸಚಿವರು ಸೂಕ್ತ ಕ್ರಮ ಕೈಗೊಂಡು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ.

ಕೆಲವಡೆ ಟೆಂಡರ್​ ನಿಯಮ ಬದಲು

ಪ್ರತಿ ವರ್ಷ ಸರ್ಕಾರವು ವೈದ್ಯಕಿಯ ಕಾಲೇಜುಗಳಿಗೆ ಹತ್ತಾರು ಕೋಟಿ ರೂ.ಅನುದಾನ ನೀಡುತ್ತಿದೆ. ಆದರೆ, ಈ ಅನುದಾನ ಸದ್ಬಳಕೆವಾಗುವ ಬದಲು ದುರ್ಬಳಕೆಯಾಗುತ್ತಿದೆ. ಕೆಲ ವೈದ್ಯಕಿಯ ಕಾಲೇಜುಗಳಲ್ಲಿ ನಿರ್ದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಳ್ಳಲು ಟೆಂಡರ್​ ಷರತ್ತುಗಳನ್ನೇ ಬದಲಾಯಿಸುತ್ತಿವೆ. ಟೆಂಡರ್​ನಲ್ಲಿ ನಿಗದಿಗಿಂತ ಹೆಚ್ಚುವರಿ ಮೊತ್ತ ನಮೂದಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ನಷ್ಟವುಂಟು ಮಾಡಲಾಗುತ್ತಿದೆ.

110 ಕೋಟಿ ರೂ.ಗಿಂತ ಹೆಚ್ಚು ಖರೀದಿ

ಬೆಂಗಳೂರು ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯು(ಬಿಎಂಸಿಆರ್​ಐ) 2022ರಿಂದ 2024ರವರೆಗೆ 100 ಕೋಟಿ ರೂ.ಗಿಂತ ಹೆಚ್ಚು ಔಷಧ, ಉಪಕರಣ, ರಾಸಾಯನ ಖರೀದಿಸಿರುವುದು ಆರ್​ಟಿಐನಲ್ಲಿ ತಿಳಿದುಬಂದಿದೆ. ಕಂಪನಿಗಳು ಔಷಧ ಸರಬರಾಜು ಮಾಡಿರುವ ಬಗ್ಗೆ ಹಣ ಪಾವತಿಸಿರುವುದು, ಕೆಲ ಬಿಲ್​ಗಳಿಗೆ ಲಾಂತರ ರೂ.ಜಮೆ ಮಾಡಿರುವುದು ದಾಖಲೆಯಲ್ಲಿ ಬಹಿರಂಗವಾಗಿದೆ. ಆದರೆ, ಟೆಂಡರ್​ ಅಥವಾ ಕೋಟೇಷನ್​ ಮೂಲಕ ಔಷಧ, ಉಪಕರಣ, ರಾಸಾಯನ ಖರೀದಿಸಿರುವುದು ಬಗ್ಗೆ ಬಿಎಂಸಿಆರ್​ಐ ಯಾವುದೇ ಮಾಹಿತಿ ನೀಡಿಲ್ಲ.

ನಿರ್ವಹಣೆಗೆ ಬೇಕಿದೆ ಸಿಬ್ಬಂದಿ

ಪ್ರತಿ ವರ್ಷ ಹೊಸದಾಗಿ ವೈದ್ಯಕಿಯ ಕಾಲೇಜು ಅಥವಾ ಆಸ್ಪತ್ರೆಗಳು ಆರಂಭವಾದರೆ ರೋಗಿಗಳಿಗೆ ಗುಣಮಟ್ಟ ಚಿಕಿತ್ಸೆ ಕಲ್ಪಿಸುವ ಕೋಟ್ಯಂತರ ರೂ.ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಆದರೆ, ರೋಗಿಗಳಿಗೆ ಸೂಕ್ತ ಸೌಲಭ್ಯ ಸಿಗಬೇಕಾದರೆ ವೈದ್ಯಕಿಯ ಉಪಕರಣಗಳ ನಿರ್ವಹಣೆಗೆ ಸಿಬ್ಬಂದಿ ಅವಶ್ಯತೆ ಇರುತ್ತದೆ. ಆದರೆ, ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ವೈದ್ಯರು ಸೇರಿ ಇತರೆ ಸಿಬ್ಬಂದಿ ಕೊರತೆ ಇದೆ. ಇನ್ನೊಂದೆಡೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ಸಿಬ್ಬಂದಿಗೆ ಸಂಬಳ ಸಿಗುತ್ತಿಲ್ಲ. ಕೆಲ ವೈದ್ಯಕಿಯ ಕಾಲೇಜುಗಳಲ್ಲಿ ಈಗಾಗಲೇ ಸರಬರಾಜು ಮಾಡಿರುವ ಉಪಕರಣಗಳನ್ನು ಅಳವಡಿಸಲು ಜಾಗದ ಕೊರತೆ ಇದೆ. ಹೀಗಿರುವಾಗ ಇನ್ನಷ್ಟು ಉಪಕರಣ ಖರೀದಿಸಿದರೆ ಎಷ್ಟರ ಮಟ್ಟಿಗೆ ರೋಗಿಗಳಿಗೆ ಇದರ ಸೌಲಭ್ಯ ಸಿಗುತ್ತದೆ ಎಂಬ ಪ್ರಶ್ನೆ ಕಾಡುತ್ತಿದೆ.

ವೈದ್ಯಕಿಯ ಶಿಕ್ಷಣ ನಿರ್ದೇಶನಾಲಯ ವ್ಯಾಪ್ತಿಯಡಿ ಬರುವ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳ ನಿರ್ದೇಶಕರಿಗೆ ಕಡ್ಡಾಯವಾಗಿ ಕೆಟಿಪಿಪಿ ಕಾಯ್ದೆ ಅನ್ವಯ ಟೆಂಡರ್​ ಪ್ರಕ್ರಿಯೆ ನಡೆಸಿ ಔಷಧ,ಉಪಕರಣ ಖರೀದಿಸಲು ಈಗಾಗಲೇ ಸೂಚನೆ ಕೊಟ್ಟಿದ್ದೇನೆ. ಟೆಂಡರ್​ ಮೂಲಕ ಖರೀದಿಸಲು ಆದೇಶ ಹೊರಡಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ತಾಕೀತು ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಕೋಟೇಷನ್​ ಮೂಲಕ ಔಷಧ, ಉಪಕರಣ ಖರೀದಿಸಲು ಅವಕಾಶ ನೀಡುವುದಿಲ್ಲ. ಏನಾದರೂ ಕೋಟೇಷನ್​ ಮೂಲಕ ಖರೀದಿಸಿದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು.

ಶರಣ ಪ್ರಕಾಶ್​ ಪಾಟೀಲ್​. ವೈದ್ಯಕಿಯ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net