ಪರಂಪರೆ ಮುಂದುವರಿದರಷ್ಟೇ ಕೊಡವರ ರಕ್ಷಣೆ

7.npk .2
ನಾಪೋಕ್ಲು ಗ್ರಾಮ ಪಂಚಾಯತಿ ಅಧ್ಯಕ್ಷರಾದ ವನಜಾಕ್ಷಿ ರೇಣುಕೇಶ್ ಭತ್ತದ ಸಸಿ(ಅಗೆ) ತೆಗೆಯುವುದರ ಮೂಲಕ(ಐಪಣಿ) ಚಾಲನೆ ನೀಡಲಾಯಿತು.
Published on

ನಾಪೋಕ್ಲು: ಪೂರ್ವಜರು ಬಿಟ್ಟುಹೋದ ಪದ್ಧತಿ, ಪರಂಪರೆ ಆಚರಣೆ ಮಾಡಿದರಷ್ಟೇ ಕೊಡವ ಜನಾಂಗದ ರಕ್ಷಣೆ ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಹಾಗೂ ನಾಪೋಕ್ಲು ಕೊಡವ ಸಮಾಜದ ಕ್ರೀಡಾ-ಸಾಂಸ್ಕೃತಿಕ, ಮನರಂಜನಾ ಕೂಟ ಹಾಗೂ ಬಿದ್ದಾಟಂಡ ಕುಟುಂಬಸ್ಥರ ಸಹಯೋಗದಲ್ಲಿ ಗುರುವಾರ ಇಲ್ಲಿನ ಬಿದ್ದಾಟಂಡ ಕುಟುಂಬಸ್ಥ(ಬುಟ್ಟಿ ಯಾಕ ಬೇಲ್)ರ ಗದ್ದೆಯಲ್ಲಿ ಆಯೋಜಿಸಿದ್ದ ಐಪಣಿರ ಆಯಿಮೆ ಪಿಞ್ಞ ಕಳಿ ಪೈಪೋಟಿ(ಬೇಲ್ ನಮ್ಮೆ) ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಂಘ-ಸಂಸ್ಥೆ, ಅಕಾಡೆಮಿಗಳು ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದರೆ ಖಂಡಿತವಾಗಿ ಸಾಹಿತ್ಯ-ಸಂಸ್ಕೃತಿ, ಉಡುಪು, ಆಚಾರ-ವಿಚಾರ ಉಳಿಯಲು ಸಾಧ್ಯ. ಕೊಡವ ಸಂಸ್ಕೃತಿ, ಸಂಪ್ರದಾಯವನ್ನು ಪ್ರಪಂಚದ ಪ್ರತಿಯೊಬ್ಬರೂ ಗೌರವಿಸುತ್ತಿದ್ದು, ನಾವು ಇದನ್ನು ಕಡೆಗಣಿಸುವುದು ಸರಿಯಲ್ಲ. ನಮ್ಮ ಪದ್ಧತಿ-ಪರಂಪರೆ, ಆಚಾರ-ವಿಚಾರ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗಿನಲ್ಲಿ ಕೃಷಿ ಚಟುವಟಿಕೆ ಪೂರ್ಣಗೊಂಡ ಬಳಿಕ ಕೈಲ್ ಮುಹೂರ್ತ ಹಬ್ಬ ಆಚರಿಸಲಾಗುವುದು. ಕೃಷಿ ಚಟುವಟಿಕೆಗೆ ಇನ್ನಷ್ಟು ಸಡಗರ ಸಂಭ್ರಮ ತುಂಬಿಕೊಳ್ಳಲು ಕಕ್ಕಡ 18ಕ್ಕೆ ಪೂರಕವಾಗಿ ಬೇಲ್ ನಮ್ಮೆ ಆಯೋಜಿಸಲಾಗಿದೆ. ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬೇಲ್ ನಮ್ಮೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲಾಗಿದೆ. ಕೂಡು ನಾಟಿ, ನಾಟಿ ಓಟದಂತಹ ಚಟುವಟಿಕೆಗಳು ಜತೆಯಲ್ಲಿ ಕೃಷಿಗೆ ಪೂರಕವಾದ ಆಟೋಟ ಹಮ್ಮಿಕೊಂಡು ಬದುಕಿನ ಆಧಾರವಾಗಿರುವ ಕೃಷಿಯಲ್ಲಿ ಯುವಜನರನ್ನು ತೊಡಗಿಸಿಕೊಳ್ಳಲು ಉತ್ತೇಜಿಸಲಾಗುತ್ತಿದೆ ಎಂದರು.

ಇಲ್ಲಿಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಭತ್ತದ ಸಸಿ(ಅಗೆ) ತೆಗೆಯುವುದರ ಮೂಲಕ(ಐಪಣಿ) ಕ್ರೀಡಾಕೂಟಕ್ಕೆ ಚಾಲನೆ ನೀಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಸಾರ್ವಜನಿಕರನ್ನು ಒಳಗೊಂಡಂತೆ ಪ್ರಾಥಮಿಕ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ಭತ್ತದ ಸಸಿ ತೆಗೆಯುವುದು ಹಾಗೂ ನಾಟಿ ಪೈಪೋಟಿ ಸೇರಿದಂತೆ ವೈವಿಧ್ಯ ಸ್ಪರ್ಧೆ ಆಯೋಜಿಸಲಾಗಿತ್ತು.

ನಾಪೋಕ್ಲು ಕೊಡವ ಸಮಾಜದ ಕ್ರೀಡಾ-ಸಾಂಸ್ಕೃತಿಕ, ಮನೋರಂಜನಾ ಕೂಟದ ಅಧ್ಯಕ್ಷ ಬಿದ್ದಾಟಂಡ ಯಸ್.ತಮ್ಮಯ್ಯ, ಕಾರ್ಯದರ್ಶಿ ನಾಯಕಂಡ ದೀಪು ಚಂಗಪ್ಪ, ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಬಾಚಮಂಡಲ ಲವ ಚಿನ್ನಪ್ಪ, ಕಾರ್ಯದರ್ಶಿ ಚೇಕ್ ಪೂವಂಡ ಅಪ್ಪಚ್ಚು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಮುಖಂಡರಾದ ಶಿವಚಾಳಿಯಂಡ ಅಂಬಿ, ಬಿದ್ದಾಟಂಡ ಕುಟುಂಬದ ಹಿರಿಯರಾದ ಡಿಕ್ಕಿ ಸೋಮಯ್ಯ, ಬಿದ್ದಾಟಂಡ ಕಾರ್ಯಪ್ಪ, ಚಿನ್ನಸ್ವಾಮಿ, ಮುಕ್ಕಾಟಿರ ಸೂತನ್ ಸುಬ್ಬಯ್ಯ, ಕಲಿಯಂಡ ಸಂಪನ್ ಅಯ್ಯಪ್ಪ, ಕುಡಿಯರ ಮುತ್ತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net