

ಮಡಿಕೇರಿ: ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಹೇಗೆ ಮೂಲ ನಿವಾಸಿಗಳೋ ಹಾಗೇ ಕೊಡವ ಪ್ರಾಂತ್ಯಕ್ಕೆ ಕೊಡವರು ಮಾತ್ರ ಆದಿಮಸಂಜಾತರಾಗಿದ್ದಾರೆ. ಇಲ್ಲಿಗೆ ಬಂದು ನೆಲೆಸಿದವರು ಈ ನೆಲದ ನಾಗರಿಕರೇ ಹೊರತು ಸ್ಥಳೀಯರಲ್ಲ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದರು.
ಅರೆಕಾಡು ಹೊಸ್ಕೇರಿ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸಂವಿಧಾನದ ಆರ್ಟಿಕಲ್ ೨೪೪ಆರ್/ಡಬ್ಲ್ಯೂ ೬ನೇ ಮತ್ತು ೮ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಪಡೆದುಕೊಳ್ಳುವುದು ನಮ್ಮ ಪ್ರಾಚೀನ ಭೂಮಿಯನ್ನು ಉಳಿಸಿಕೊಳ್ಳಲು ಮತ್ತು ರಕ್ಷಿಸಲು ಸಹಕಾರಿಯಾಗಿದೆ. ಕೊಡವರು ಕೊಡವ ಪ್ರದೇಶದ ಸ್ಥಳೀಯರು, ಕೊಡವರನ್ನು ಹೊರತುಪಡಿಸಿ ಇಲ್ಲಿಗೆ ಬಂದು ನೆಲೆಸಿದವರು ಈ ನೆಲದ ನಾಗರಿಕರೇ ಹೊರತು ಸ್ಥಳೀಯರಲ್ಲ. ಮತದಾರರ ಪಟ್ಟಿಯಲ್ಲಿ ನಮೂದಿಸಿದವರನ್ನು ನಾಗರೀಕರೆಂದು ಪರಿಗಣಿಸಲಾಗುತ್ತದೆ. ಆದರೆ, ಅವರು ಕೊಡವ ನೆಲದ ಮೂಲನಿವಾಸಿಗಳಾಗಲು ಸಾಧ್ಯವಿಲ್ಲ. ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಹೇಗೆ ಸ್ಥಳೀಯರೋ ಹಾಗೇ ಕೊಡವರು ಕೊಡವ ಪ್ರಾಂತ್ಯಕ್ಕೆ ಸ್ಥಳೀಯರು. ಕೊಡವರಿಗೆ ಯಾವುದೇ ಪ್ರತ್ಯೇಕ ಸಾಂಸ್ಕೃತಿಕ ಮೂಲ ಅಥವಾ ಕೊಡವ ನೆಲವಿಲ್ಲ ಎಂದರು.
ಆರಂಭದಲ್ಲಿ ಇಡೀ ಕೊಡವ ಭೂಮಿ ಕೊಡವರಿಗೆ ಸೇರಿತ್ತು. ಆದರೆ, ನಮ್ಮನ್ನು ಆಳಿದ ಹೊರಗಿನ ವಿಜಯಶಾಲಿಗಳು ನಮ್ಮ ಪೂರ್ವಜರ ಭೂಮಿಯನ್ನು ವಶಪಡಿಸಿಕೊಂಡರು ಮತ್ತು ವಲಸಿಗರಿಗೆ ಹಂಚಿದರು. ಗುತ್ತಿಗೆಗೆ ನೀಡಿದರು ಮತ್ತು ಹೊರಗಿನ ಶ್ರೀಮಂತರಿಗೆ ಮಾರಾಟ ಮಾಡಿದರು. ಬ್ರಿಟಿಷರು ಕೂಡ ಇದನ್ನೇ ಅನುಸರಿಸಿದರು. ಆದರೆ, ಈ ಕೊಡವ ನೆಲದ ಪೂರ್ವಿಕರ ಆನುವಂಶಿಕ ಸಾಮುದಾಯಿಕ ಭೂಮಿ, ದೇವಕಾಡ್, ಮಂದ್‌ಗಳು, ದೇವಾಲಯದ ಭೂಮಿ, ಗೋಮಾಳಗಳ(ಬಾಣೆ) ಭೌಗೋಳಿಕ, ಭೌತಿಕ ಮತ್ತು ಪರಿಸರ ಸಮತೋಲನವನ್ನು ಕೊಡವರು ಕಾಪಾಡಿಕೊಂಡು ಬಂದಿದ್ದಾರೆ ಎಂದರು.
ಭಾರತವು ಸ್ವಾತಂತ್ರ್ಯವನ್ನು ಪಡೆದ ನಂತರ ಮತ್ತು ತರುವಾಯ ೧೯೫೬ ರಲ್ಲಿ ರಾಜ್ಯ ಮರು-ಸಂಘಟನೆ ಕಾಯಿದೆಯಡಿಯಲ್ಲಿ ನಮ್ಮ ಕೊಡವ ರಾಜ್ಯವನ್ನು ಕರ್ನಾಟಕದಲ್ಲಿ ವಿಲೀನಗೊಳಿಸಿದ ನಂತರ ದೊಡ್ಡ ಪ್ರಮಾಣದ ಒಳಹರಿವು ಸಂಭವಿಸಿತು. ಇದರಿಂದ ಇಡೀ ಕೊಡವ ಜನಸಂಖ್ಯಾಶಾಸ್ತ್ರ ಅಪಾಯಕ್ಕೆ ಸಿಲುಕಿದೆ. ಸ್ಥಳೀಯ ಕೊಡವರನ್ನು ನಿಯಂತ್ರಿಸಲು ಅವರು ಕಠಿಣ ಕಾನೂನುಗಳನ್ನು ಪರಿಚಯಿಸಿದರು. ನಮ್ಮ ನೆಲ, ಜಲ ಸಂಪನ್ಮೂಲ, ಖನಿಜ ಮತ್ತು ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುವವರು ಇದ್ದಾರೆ. ಇವರಿಂದಾಗಿ ಮೂಲನಿವಾಸಿ ಕೊಡವರ ಜೀವನ ಶೋಚನೀಯವಾಗಿದೆ ಎಂದು ನಾಚಪ್ಪ ಆರೋಪಿಸಿದರು.
ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ಸಿಎನ್‌ಸಿಯ ಹೋರಾಟ ಮತ್ತು ಎನ್.ಯು.ನಾಚಪ್ಪರವರ ಕೊಡವರ ಪರವಾದ ವಾದವನ್ನು ಶ್ಲಾಘಿಸಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಕ್ಲಬ್ ವತಿಯಿಂದ ಎನ್.ಯು.ನಾಚಪ್ಪ ಹಾಗೂ ಹಿರಿಯ ಸಹಕಾರಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕ್ಲಬ್‌ನ ಹಿರಿಯ ಸದಸ್ಯ ಕುಕ್ಕೇರ ಕೇಶು ಉತ್ತಪ್ಪ, ನೆಲ್ಲಮಕ್ಕಡ ಪವನ್ ಮತ್ತಿತರ ಪ್ರಮುಖರು ಹಾಗೂ ಮಹಿಳಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.