

ಮಡಿಕೇರಿ: ಕೊಡಗಿನ 18 ಮೂಲ ನಿವಾಸಿಗಳಿಗೂ ಸ್ಥಾನಮಾನ ನೀಡಲಿ ಎಂದು ಆದಿವಾಸಿಗಳ ಸಮನ್ವಯ ಸಮಿತಿ ಒತ್ತಾಯಿಸಿರುವುದು ನಮಗೆ ಬೇಕಿಲ್ಲವೆಂದು ಕೊಡವ ಮಕ್ಕಡ ಕೂಟ ನೀಡಿರುವ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆಯೆಂದು ಕೊಡವ ಭಾಷಿಕ ಸಮುದಾಯಗಳ ಕೂಟ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ, ಒಕ್ಕೂಟದಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಕೊಡವ ಸಂಸ್ಕೃತಿಯ ಬಹುಭಾಗ ಕೊಡವ ಮೂಲನಿವಾಸಿ ಭಾಷಿಕರ ಸಮನ್ವಯದಿಂದಲೇ ಶ್ರೀಮಂತಿಕೆಗೆ ಪಾತ್ರವಾಗಿದೆ ಎಂದು ಹೆಮ್ಮೆಯಿಂದ ಹೇಳಲು 18 ಸಮುದಾಯಗಳ ಕೂಟ ಇಚ್ಛಿಸುತ್ತದೆ. ಕೊಡವ ಮಕ್ಕಡ ಕೂಟದ ಬೇಜವಾಬ್ದಾರಿ ಹೇಳಿಕೆ 18 ಭಾಷಿಕ ಮೂಲನಿವಾಸಿ ಜನಾಂಗದವರ ಸ್ವಾಭಿಮಾನ ಹಾಗೂ ಆತ್ಮ ಗೌರವಕ್ಕೆ ಧಕ್ಕೆ ತರುವಂತಿದ್ದು, ಈ ವಿಚಾರವಾಗಿ ಜನಾಂಗದವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.
ಅನಾದಿ ಕಾಲದಿಂದಲೂ ಪೂರ್ವಿಕರ ಬಳುವಳಿಯಾಗಿ ‘ಕೊಡವಾಮೆಗೆ’ ಕೊಡವ ಭಾಷಿಕ ಜನಾಂಗದವರ ಕೊಡುಗೆ ಅನನ್ಯ ಹಾಗೂ ಅಪಾರವಾದುದು. ಇವರ ಕೊಡುಗೆ ಮೂಲ ನಿವಾಸಿ ಸಂಸ್ಕೃತಿಗೆ ಸಮನ್ವಯವಾಗಿ ಎರಡು ಕಣ್ಣುಗಳಿದ್ದಂತೆ. ಇದರಲ್ಲಿ ಒಂದು ಕಣ್ಣು ಊನವಾದರೂ, ಕೊಡವ ಸಂಸ್ಕೃತಿ ಭಾಗಶಃ ಊನವಾದಂತೆ. ಸಂಸ್ಕೃತಿ ಪರಿಪೂರ್ಣತೆ ಕಂಡಂತಿಲ್ಲ. ಇತಿಹಾಸವನ್ನು ಪರಾಮರ್ಶಿಸಿದಾಗ ಇವೆಲ್ಲವೂ ಅನಾವರಣಗೊಳ್ಳುವುದರಲ್ಲಿ ಸಂಶಯವಿಲ್ಲವೆಂದು ಡಾ.ಮೇಚಿರ ಸುಭಾಷ್ ನಾಣಯ್ಯ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಂಸ್ಕೃತಿಯ ಹಾಗೂ ಮೂಲ ನಿವಾಸಿ ಜನಾಂಗದವರ ವಿಚಾರದಲ್ಲಿ ಅನಗತ್ಯ ಹೇಳಿಕೆಗಳು ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವಂತಹ ವ್ಯತಿರಿಕ್ತ ಹೇಳಿಕೆಗಳು ಬರುವುದು ನಿಲ್ಲಲಿ ಎಂದು ಮನವಿ ಮಾಡಿದ್ದಾರೆ.