

ಅರವಿಂದ ಅಕ್ಲಾಪುರ ಶಿವಮೊಗ್ಗ
ಬಡವರು ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸುವ ಸಂಬಂಧ 2016ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ 94-ಸಿ ಹಾಗೂ 94-ಸಿಸಿ ಕಾಯ್ದೆಗಳಿಂದಲೂ ಜಿಲ್ಲೆಯ ಬಡವರಿಗೆ ಸಂಪೂರ್ಣ ನ್ಯಾಯ ಸಿಗಲೇ ಇಲ್ಲ.
ಹೀಗಾಗಿ ಇಂದಿಗೂ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರು ಆತಂಕದಲ್ಲೇ ದಿನದೂಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಕ್ರಮ-ಸಕ್ರಮಕ್ಕಾಗಿ 2021ರಲ್ಲಿ ಸರ್ಕಾರ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಕಾಶ ವಿಸ್ತರಣೆ ಮಾಡಿತು. ಆದರೆ ಇದರಿಂದ ಮಹತ್ತರ ಬದಲಾವಣೆಗಳೇನೂ ಆಗಲಿಲ್ಲ.
ಸರ್ಕಾರದ ಉದ್ದೇಶ ಸರಿಯಾಗಿಯೇ ಇತ್ತು. ಅಕ್ರಮ-ಸಕ್ರಮ ಮೂಲಕ ಗ್ರಾಮೀಣ ಭಾಗದ ಜನರಿಗೆ 94-ಸಿ ಹಾಗೂ ನಗರ-ಪಟ್ಟಣ ಪ್ರದೇಶಗಳ ಜನರಿಗೆ 94-ಸಿಸಿ ಮೂಲಕ ಕಾಯಂ ನ್ಯಾಯ ಒದಗಿಸುವ ಗುರಿ ಹೊಂದಲಾಗಿತ್ತು. ನೇರವಾಗಿ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಬೇಕಿದ್ದರಿಂದ ಮಧ್ಯವರ್ತಿಗಳ ಹಾವಳಿಯೂ ಇರಲಿಲ್ಲ. ಭ್ರಷ್ಟಾಚಾರ ಸಾಧ್ಯತೆಗಳು ಕಡಿಮೆಯಿದ್ದವು. ಇಷ್ಟೆಲ್ಲಾ ಇದ್ದರೂ ಕಾಯ್ದೆಗಳು ನಿರೀಕ್ಷಿತ ಫಲಿತಾಂಶ ನೀಡಲಿಲ್ಲ.
ನಗರ, ಪಟ್ಟಣ ಪ್ರದೇಶಗಳಲ್ಲಿ 20* 30 ವಿಸ್ತೀರ್ಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 50*80 ಅಳತೆಯಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ನೀಡಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಸಾಮಾನ್ಯ ವರ್ಗದವರಿಗೆ 10 ಸಾವಿರ ರೂ. ಹಾಗೂ ಪರಿಶಿಷ್ಟ ಜಾತಿ, ಪಂಗಡ, ಅಂಗವಿಕಲರು ಮತ್ತು ಮಾಜಿ ಸೈನಿಕರಿಗೆ 5 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿತ್ತು.
ಕಾಯ್ದೆ ಜಾರಿಗೆ ಬಂದ ಆರಂಭದ ದಿನಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಅತ್ಯಂತ ಹುಮ್ಮಸ್ಸಿನಿಂದ ಓಡಾಟ ಮಾಡಿ ಜನರಲ್ಲಿ ಅರಿವು ಮೂಡಿಸಿದರು. ಇದರ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರಗಳನ್ನೂ ಏರ್ಪಡಿಸಲಾಗಿತ್ತು. ಆದರೆ ಆಡಳಿತ ಯಂತ್ರದ ನಿರಾಸಕ್ತಿಯಿಂದ ಮಹತ್ವಾಕಾಂಕ್ಷಿ ಯೋಜನೆ ಮೂಲೆ ಸೇರಿತು.
ಮಲೆನಾಡಿನಲ್ಲಿ ವಿಫಲ:ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 94-ಸಿ ಹಾಗೂ 94ಸಿಸಿ ಕಾಯ್ದೆ ಬಹುತೇಕ ಯಶಸ್ವಿಯಾಗಿದೆ. ಆದರೆ ಮಲೆನಾಡು ಜಿಲ್ಲೆಗಳಲ್ಲಿ ಮಾತ್ರ ಸಂಪೂರ್ಣ ವಿಫಲವಾಗಿದೆ. ಕಂದಾಯ ಸಚಿವರಾಗಿದ್ದ ಸಂದರ್ಭ ಕಾಗೋಡು ತಿಮ್ಮಪ್ಪ ಯೋಜನೆ ಪ್ರಗತಿಗೆ ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಅವರ ಸ್ವಂತ ಜಿಲ್ಲೆಯಲ್ಲೇ ಕಾಯ್ದೆ ಫಲ ನೀಡಲಿಲ್ಲ ಎಂಬುದು ವಿಪರ್ಯಾಸ. ಬಡವರ ಅಕ್ರಮ ಮನೆಗಳನ್ನು ಸಕ್ರಮ ಮಾಡುವ ಯೋಜನೆಗೆ 2009ರಲ್ಲೇ ಚಾಲನೆ ಸಿಕ್ಕಿತ್ತು. 2016ರ ವೇಳೆ ಸಿದ್ದರಾಮಯ್ಯ ಸರ್ಕಾರದಲ್ಲಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಯೋಜನೆ ಜಾರಿ ಮಾಡಲಾಗಿತ್ತು.
ಅರ್ಜಿ ತಿರಸ್ಕೃತಕ್ಕೆ ಹಲವು ಕಾರಣ:ಶಿವಮೊಗ್ಗ ಜಿಲ್ಲೆಯಲ್ಲಿ 79,181 ಅರ್ಜಿ ತಿರಸ್ಕೃತಗೊಳ್ಳಲು ಹಲವು ಕಾರಣಗಳಿವೆ. ಇಲ್ಲಿನ ಭೂಮಿ ಗುರುತಿಸುವಿಕೆಯೇ ಪ್ರಮುಖ ಸಮಸ್ಯೆ. ಕಂದಾಯ, ಅರಣ್ಯ, ಡೀಮ್ಡ್ ಫಾರೆಸ್ಟ್, ಗೋಮಾಳ, ಸೊಪ್ಪಿನಬೆಟ್ಟ, ಇನಾಂ ಭೂಮಿ ಹೀಗೆ ಹಲವು ತೊಡಕುಗಳಿವೆ. ಹಲವು ಪ್ರಕರಣಗಳಲ್ಲಿ ಮಾರ್ಗಸೂಚಿಯೇ ಅಡ್ಡಿಯಾಗಿತ್ತು. ಕಂದಾಯ ದಾಖಲೆಗಳಲ್ಲಿ ಹಿಡುವಳಿ ಭೂಮಿ ಎಂದು ನಮೂದಿಸಿರುವ ಜಾಗದಲ್ಲಿರುವ ಮನೆಗಳ ಸಕ್ರಮಕ್ಕೆ ಮಾರ್ಗಸೂಚಿ ಪ್ರಕಾರ ಅವಕಾಶವಿಲ್ಲ. ಗ್ರಾಮೀಣ ಭಾಗದಲ್ಲಿ ಕೊಟ್ಟಿಗೆ ಸೇರಿ ವಿಶಾಲವಾಗಿರುವ ಮನೆಗಳನ್ನೂ ಸಕ್ರಮ ಮಾಡುವ ಘೋಷಣೆ ಮಾಡಲಾಗಿತ್ತು. ಆದರೆ ಮಾರ್ಗಸೂಚಿಯಲ್ಲಿ ಅವಕಾಶ ನೀಡಿರಲಿಲ್ಲ.