ಕೋಟೆಗರಿಯಲ್ಲಿ ಹಣ್ಣುಗಳ ರಾಜನ ಘಮ ಘಮ!

The King of Fruits in Kotegari!
ಬಾಗಲಕೋಟೆ ನಗರದ ಕಾಳಿದಾಸ ಕಲ್ಯಾಣ ಮಂಟಪದಲ್ಲಿ ತೋಟಗಾರಿಕಾ ಇಲಾಖೆ ಹಮ್ಮಿಕೊಂಡಿರುವ ಮಾವು ಮೇಳದ ದೃಶ್ಯ.
Published on

ಬಾಗಲಕೋಟೆ: ಕಣ್ಣು ಹಾಯಿಸಿದಲೆಲ್ಲ ತರಹೇವಾರಿ ಮಾವಿನ ಹಣ್ಣು. ಹಣ್ಣಿನ ಘಮ ಘಮ ಸುವಾಸನೆ.ನೋಡಿದರೆ ಸಾಕು ಬಾಯಿ ಚಪ್ಪರಿಸಬೇಕು ಎನ್ನುವ ಅಭಿಲಾಷೆ. ಹಣ್ಣುಗಳ ರಾಜ ಮಾವು ನೋಡಲು, ಖರೀದಿಗೆ ಮುಗಿಬಿದ್ದಿರುವ ಜನ!!

ಬಾಗಲಕೋಟೆ ನಗರದ ಕಾಳಿದಾಸ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ತೋವಿವಿ ಸಹಯೋಗದಲ್ಲಿ ಮೂರು ದಿನ ಹಮ್ಮಿಕೊಂಡಿರುವ ಮಾವು ಮೇಳ ಹಾಗೂ ಪ್ರದರ್ಶನ, ಮಾರಾಟ ಮೇಳದಲ್ಲಿ ಕಂಡು ಬಂದ ದೃಶ್ಯಗಳಿವು.

ಮಾವು ಎಂದರೆ ಗ್ರಾಹಕರ ಅಚ್ಚುಮಚ್ಚಿನ ಹಣ್ಣು. ಮಧ್ಯ ವರ್ತಿಗಳ ಹಾವಳಿ ತಪ್ಪಿಸಿ ಒಂದೇ ಸೂರಿನಡಿ ನಾನಾ ಮಾವು ನೋಡಲು, ಖರೀದಿಗೆ ರೈತರು ಗ್ರಾಹಕ ನಡುವೆ ಸೇತುವೆ ಕಲ್ಪಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಮೇಳದಲ್ಲಿ ರಾಸಾಯನಿಕ ಬಳಕೆ ಮಾಡಿ ಹಣ್ಣಾಗುವಂತೆ ಮಾಡಿದ ಮಾವುಗಳ ಪ್ರದರ್ಶನಕ್ಕೆ ಅವಕಾಶ ಇರಲಿಲ್ಲ. ನೈಸರ್ಗಿಗವಾಗಿ ಸಿದ್ಧಪಡಿಸಿದ ಮಾವು ಕಂಡು ಬಂದಿದ್ದು ಸಂಭ್ರಮ ಇಮ್ಮಡಿಗೊಳಿಸಿತು. ಮೇಳದಲ್ಲಿ ಹತ್ತಕ್ಕೂ ಹೆಚ್ಚು ಮಳಿಗೆಯನ್ನು ಹಾಕಲಾಗಿತ್ತು. ರೈತರೇ ಇಲ್ಲಿ ಮಾರಾಟಗಾರರು ಆಗಿದ್ದರೂ ಯಾರೂ ಮಧ್ಯವರ್ತಿಗಳು ಕಾಣಸಲಿಲ್ಲ. ಗ್ರಾಹಕರು ಸಹ ಖುಷಿಯಿಂದ ಒಂದು ಕೆಜಿ ಹಾಗೂ ಎರಡು ಕೆಜಿ ಮಾವುಗಳನ್ನು ಖರೀದಿಸಿದರು.

ದೇವಗಡ ಅಫೂಸ್ ಮಾವುಗಳಿಗೆ ಭಾರಿ ಬೇಡಿಕೆ

ಮಾವು ಮೇಳದಲ್ಲಿ ದೇವಗಡ ಅಪೂಸ್ ಹಾಗೂ ರತ್ನಾಗಿರಿ ಅಪಾಸ್ ಮಾವು ಹಣ್ಣಿಗೆ ಭಾರಿ ಬೇಡಿಕೆ ಕಂಡುಬಂದಿತು. ಒಂದೇ ದಿನದಲ್ಲಿ ನೂರು ಬಾಕ್ಸ್‌ಗೂ ಹೆಚ್ಚು ಮಾರಾಟವಾಗಿದೆ. ಪ್ರತಿಯೊಬ್ಬರೂ ದೇವಗಡ ಮಾವು ರುಚಿ ನೋಡಿ ಒಂದೊಂದು ಬಾಕ್ಸ್ ಖರೀದಿಸಿದರು.

ಕೆಜಿಗೆ ಎರಡೂವರೆ ಲಕ್ಷ ರೂ. ಆಪೂಸ್, ಕೇಸರ್, ಬೇನ್‌ಶಾನ್, ಮಲ್ಲಿಕಾ, ಬಾದಾಮಿ, ತೋತಾಪುರಿ, ದಶೇಹರಿ, ರಸಪುರಿ, ರತ್ನಾ, ಅರ್ಕಾ ಪುನಿತ, ಕಂಕೋನರುಚಿ, ದಶಾಹರಿ, ಅರ್ಕಾ ಅರುಣಾ, ಲಾಂಗ್ರಾ, ರಸಪುರಿ, ಟಾಮಿ ಆ್ಯಟ್ಕಿನ್ಸ್, ಚಂದ್ರಾಮ, ಆಸ್ಟಿನ್, ಅರ್ಕಾ ಉದಯ, ಪೈರಿ, ಅರ್ಕಾ ಅನಮೋಲ, ಅಮರಾಪಳ್ಳಿ, ಇಮಾಮ್ ಪಸಂದ, ಲಂಗಡಾ ಸೇರಿ ವಿವಿಧ ತಳಿ ಹಣ್ಣುಗಳ ರಂಗು ಹೆಚ್ಚಿಸಿದವು. ಕೆಜಿಗೆ ಎರಡೂವರೆ ಲಕ್ಷ ಬೆಲೆ ಬಾಳುವ ಮಿಯಾ ಜಾಕಿ ಮಾವು ಮಾರಾಟ ಮೇಳದಲ್ಲಿ ಗಮನಸೆಳೆಯಿತು. ಇನ್ನು ಮಿಯಾ ಜಾಕಿ ಔಷಧ ಎಲ್ಲರ ಕಣಮ್ನ ಸೆಳೆಯಿತು. ಕಾಟಾಚಾರಕ್ಕೆ ಮೇಳ ಬೇಡ ತೋಟಗಾರಿಕೆ ಇಲಾಖೆ ಮಾವು ಸೀಜನ್ ಮುಗಿಯುವ ಕೊನೆಯ ಹಂತಕ್ಕೆ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ. ಆದರೆ ಮಾವು ಮೇಳವನ್ನು ಒಂದೆರಡು ವಾರ ಮುಂಚೆ ಏರ್ಪಡಿಸಿದ್ದರೆ ಇನ್ನೂ ಹೆಚ್ಚಿನ ಬೇಡಿಕೆ ಸಿಗುತ್ತಿತ್ತು. ರೈತರಿಗೂ ಉತ್ತಮ ವ್ಯಾಪಾರವಾಗುತ್ತಿತ್ತು. ಮುಂದಿನ ವರ್ಷವಾದರೂ ಇಲಾಖೆಯವರು ಏಪ್ರಿಲ್ ತಿಂಗಳಿನಲ್ಲಿ ಮೇಳ ಆಯೋಜನೆ ಮಾಡಬೇಕು ಎಂದು ರೈತರು ವಿಜಯವಾಣಿ ಎದುರು ತಮ್ಮ ಅನಿಸಿಕೆ ಹಂಚಿಕೊಂಡರು.

ಮಾವು ಎಲ್ಲ ಹಣ್ಣುಗಳಿಗಿಂತ ವಿಭಿನ್ನವಾದ ರುಚಿ ಹೊಂದಿದೆ. ಗ್ರಾಹಕರು ಇಷ್ಟಪಡುತ್ತಾರೆ. ಧಾರವಾಡ ಮತ್ತು ದೇವಗಡ ಆಪೂಸ್ ಹಣ್ಣಿಗೆ ಬೇಡಿಕೆ ಬಹಳವಿದೆ. ಮಾವು ಮೇಳದಲ್ಲಿ ನಮಗೆ ಒಳ್ಳೆಯ ಲಾಭ ಬಂದಿದೆ. ನಮ್ಮ ನಿರೀಕ್ಷೆಗೆ ಮೀರಿ ನಾವು ತಂದ ಮಾವು ಮಾರಾಟವಾಗಿದೆ.
ಮಲ್ಲಿಕಾರ್ಜುನ ದೇವೇಂದ್ರಪ್ಪ ರೊಟ್ಟಿಗವಾಡ ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net