ಮೈಲಾರದ ಸರ್ಕಾರಿ ಆಸ್ಪತ್ರೆ ವೈದ್ಯನೇ ಕೊಲೆಗಾರ

Haveri SP Hanumantharaya
Published on

ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದ ಶಿಬಾರ ಬಳಿ ಜು. 28ರಂದು ಶವ ಪತ್ತೆಯಾದ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಹೂವಿನಹಡಗಲಿ ತಾಲೂಕಿನ ಮೈಲಾರದ ಸರ್ಕಾರಿ ಆಸ್ಪತ್ರೆ ವೈದ್ಯನೇ ಕೊಲೆ ಮಾಡಿರುವುದು ತನಿಖೆಯಿಂದ ಬಹಿರಂಗವಾಗಿದೆ.

ಈ ಪ್ರಕರಣದ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಹನುಮಂತರಾಯ, ಗುತ್ತಲ ರಸ್ತೆ ಶಿಬಾರ ಬಳಿ ಅಪರಿಚಿತ ವ್ಯಕ್ತಿಯ ಶವ ಜು. 28ರಂದು ಪತ್ತೆಯಾಗಿತ್ತು. ಸ್ಥಳ ಪರಿಶೀಲಿಸಿದಾಗ ಸಿಕ್ಕ ಡಿಎಲ್ ಆಧಾರದ ಮೇಲೆ ಹೂವಿನಹಡಗಲಿಯ ನವೀನ್ ರಾಠೋಡ (26) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿತ್ತು.

ಬಳಿಕ ಮೃತ ನವೀನ್ ಸಂಬಂಧಿಕರಿಗೆ ಮೃತದೇಹ ಪತ್ತೆಯಾದ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು. ನವೀನ್ ಸಂಬಂಧಿಕರು ಈ ಬಗ್ಗೆ ದೂರು ನೀಡಿದ್ದರು. ನವೀನ್ ದೇಹದ ಮೇಲೆ ಗಾಯವಾಗಿದ್ದವು. ಹೀಗಾಗಿ ಕೊಲೆಯಾಗಿರುವ ಸಂಶಯ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದರು.

ಆರೋಪಿಗಳಾದ ಪ್ರಶಾಂತ ಲಮಾಣಿ ಹಾಗೂ ಮೈಲಾರದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಚಿರಂಜೀವಿ ಶಾಂತಾನಾಯ್ಕ ಎಂಬುವರನ್ನು ಬಂಧಿಸಲಾಗಿದೆ. ಮೃತ ನವೀನ್ ಸಂಬಂಧಿಯಾಗಿದ್ದ ಡಾ. ಚಿರಂಜೀವಿ ಮನೆಯಲ್ಲಿಯೇ ನವೀನ್ ಇರುತ್ತಿದ್ದ. ಮದ್ಯ ವ್ಯಸನಿಯಾಗಿದ್ದರಿಂದ ಆಗಾಗ ಮನೆಯಲ್ಲಿ ನವೀನ್ ಮತ್ತು ಚಿರಂಜೀವಿ ನಡುವೆ ಗಲಾಟೆ ನಡೆಯುತ್ತಿತ್ತು. ಇದರಿಂದ ಬೇಸತ್ತಿದ್ದ ಡಾ. ಚಿರಂಜೀವಿ, ಆಸ್ಪತ್ರೆಯ ಸಹಾಯಕನಾಗಿದ್ದ ಪ್ರಶಾಂತನೊಂದಿಗೆ ಸೇರಿ ಕೊಲೆ ಸಂಚು ರೂಪಿಸಿದ್ದ. ಇಬ್ಬರೂ ಸೇರಿ ನವೀನ್​ಗೆ ತಮ್ಮದೇ ಕ್ಲಿನಿಕ್​ನಲ್ಲಿದ್ದ 10 ನಿದ್ದೆ ಮಾತ್ರೆಗಳನ್ನು ಮದ್ಯದಲ್ಲಿ ಸೇರಿಸಿ ಕುಡಿಸಿದ್ದರು. ಆತ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಬೈಕ್​ನಲ್ಲಿ ತಂದು ಮೈಲಾರದ ಬಸ್ ನಿಲ್ದಾಣದ ಬಳಿ ನವೀನ್​ನನ್ನು ಬಿಟ್ಟು ಹೋಗಿದ್ದರು. ಮತ್ತೆ ಸಂಶಯಗೊಂಡು ಚಿರಂಜೀವಿ ತಮ್ಮ ಕಾರಿನಲ್ಲಿ ನವೀನನನ್ನು ಹಾಕಿಕೊಂಡು ಶಿಬಾರ ಬಳಿ ಬಂದು ಬಟ್ಟೆಯಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಬಳಸಿದ್ದ ಕಾರು ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದರು.

ನವೀನ್ ಮೃತದೇಹ ಪತ್ತೆಯಾದ ಬಳಿಕ ವಿಚಾರಣೆ ವೇಳೆ ವೈದ್ಯ ಚಿರಂಜೀವಿ ಅಮಾಯಕನಂತೆ ನಟಿಸಿದ್ದ. ನವೀನ್ ಮೃತದೇಹ ನೋಡಿಕೊಂಡು ಹೋಗಿದ್ದ. ತನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಂಡಿದ್ದ. ಆದರೆ, ವಿಚಾರಣೆ ನಡೆಸಿದಾಗ ಎಲ್ಲವನ್ನೂ ಬಾಯಿ ಬಿಟ್ಟಿದ್ದಾನೆ. ಈ ಪ್ರಕರಣದ ತನಿಖೆ ಮುಂದುವರಿದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ, ಡಿವೈಎಸ್ಪಿ ಡಾ. ಶಿವಾನಂದ ಚಲವಾದಿ, ಡಿಸಿಆರ್​ಬಿ ಡಿಎಸ್ಪಿ ಎಂ.ಎಸ್. ಪಾಟೀಲ ಗ್ರಾಮೀಣ ಠಾಣೆ ಸಿಪಿಐ ಕೆ. ನಾಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net