ದೇಶದ ಭವಿಷ್ಯದ ಕೀಲಿ ಶಿಕ್ಷಕರ ಕೈಲಿ

BMS SANAMANA 17
Published on

ಭೀಮಸಮುದ್ರ: ದೇಶದ ಉಜ್ವಲ ಭವಿಷ್ಯ ಶಿಕ್ಷಕರ ಬದ್ಧತೆ, ಕರ್ತವ್ಯ ನಿಷ್ಠೆ, ನಿಸ್ವಾರ್ಥ ಸೇವೆಯಲ್ಲಿ ಅಡಗಿದೆ ಎಂದು ಯೋಗ ಕ್ಲಬ್ ಹಿರಿಯ ಸದಸ್ಯ ಟಿ.ಬಸವರಾಜಪ್ಪ ಹೇಳಿದರು.

ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಒಂದು ಕುಟುಂಬ, ಊರು, ರಾಜ್ಯ, ದೇಶ ಸಮಗ್ರವಾಗಿ ಅಭಿವೃದ್ಧಿ ಕಾಣಬೇಕಾದರೆ ಅಲ್ಲಿನ ಶೈಕ್ಷಣಿಕ ಪ್ರಗತಿ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮುಖಂಡ ವೀರಣ್ಣಗೌಡ ಮಾತನಾಡಿ, ಗುರುವಿನ ಮಾರ್ಗದರ್ಶನ ಇಲ್ಲದೆ ಯಾವುದೇ ರೀತಿ ಪ್ರಗತಿ ಸಾಧಿಸಲು ಅಗದು. ಆದ್ದರಿಂದ ಶಿಕ್ಷಕರಿಗೆ ಸಮಾಜದಲ್ಲಿ ಹೆಚ್ಚು ಗೌರವ ಇದ್ದು, ಅದನ್ನು ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ಅವರ ಕರ್ತವ್ಯ ನಿಷ್ಠೆ ಮೇಲೆ ಅವಲಂಭಿಸಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಂಘಟಕ ಜಿ.ಎಸ್.ಸಿದ್ದೇಶ್ ಮಾತನಾಡಿ, ಗುರುವಿನ ಸೇವೆ ಮಾಡಿದರೆ ಜ್ಞಾನದ ಜತೆಗೆ ಭವಿಷ್ಯ ಉತ್ತಮವಾಗಿರುತ್ತದೆ ಎಂದರು.

ಹೊಳಲ್ಕೆರೆ ತಾಲೂಕು ಶಿಕ್ಷಕ ಪ್ರಶಸ್ತಿ ಪುರಸ್ಕೃತ ಟಿ.ಎಸ್.ಆನಂದಪ್ಪ, ಹೊಳಲ್ಕೆರೆ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್.ಮೃತ್ಯುಂಜಯಪ್ಪ, ಮುಖ್ಯಶಿಕ್ಷಕ ಬಿ.ತಿಪ್ಪೇಸ್ವಾಮಿ, ಸಹ ಶಿಕ್ಷಕರಾದ ಅಜ್ಜಪ್ಪ ಮಾಸ್ಟರ್, ಎಂ.ಎನ್.ರಾಮು ಇತರರನ್ನು ಸನ್ಮಾನಿಸಲಾಯಿತು. ಭೀಮಸಮುದ್ರ ಹಾಗೂ ತುರೇಬೈಲು ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net