

ವಿರಾಜಪೇಟೆ:
ವಿದ್ಯಾರ್ಥಿ ಜೀವನದ ಯಶಸ್ಸಿಗೆ ವಚನ ಸಾಹಿತ್ಯದ ಅರಿವು ಅತಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ವಿರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ವಚನ ಸಾಹಿತ್ಯ ಮತ್ತು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ಶನಿವಾರ ಜಂಟಿಯಾಗಿ ಹಮ್ಮಿಕೊಂಡಿದ್ದ "ವಿದ್ಯಾರ್ಥಿಗಳೆಡೆಗೆ ವಚನಗಳ ನಡಿಗೆ ’" ಚಿಂತನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯಕ್ಕೆ ಹೊಸ ಹೊಳಪು ನೀಡಿದ ಹನ್ನೆರಡನೇ ಶತಮಾನದ ವಚನಕಾರರ ವಚನ ಸಾಹಿತ್ಯದ ಜ್ಞಾನವನ್ನು ಪಠ್ಯದ ಜತೆಗೆ ಮೈಗೂಡಿಸಿಕೊಂಡಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ.
ಹಾಗೆಯೇ ಇಂದು ಜನರಲ್ಲಿರಲೇಬೇಕಾದ ಉತ್ತಮ ಸಂಸ್ಕಾರಗಳು ಹಾಗೂ ಆಚಾರ - ವಿಚಾರಗಳನ್ನು ಅರಿತು ಅದರಂತೆ ನಡೆಯುವಲ್ಲಿ ವಚನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಇದೇ ಸಂದರ್ಭ ವಿದ್ಯಾರ್ಥಿಗಳ ಸ್ಮರಣ ಶಕ್ತಿ ಹಾಗೂ ವಿಷಯ ಗ್ರಹಿಕಾ ಶಕ್ತಿಯನ್ನು ವೃದ್ದಿಸಲು ಅನುಕೂಲವಾಗುವ ಮನಸ್ಸನ್ನು ಕೇಂದ್ರೀಕರಿಸುವ ಯೋಗದ ಬಗ್ಗೆ ಮಾಹಿತಿ ನೀಡಿದರು.
ವಿರಾಜಪೇಟೆ ತಾಲೂಕು ಬಾಳುಗೋಡು ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲ ಡಾ.ದಿಲನ್ ಮಾತನಾಡಿ ಹಳಗನ್ನಡದಿಂದ ಹೊಸಗನ್ನಡಕ್ಕೆ ಸರಳ ಭಾಷೆಯ ಮೂಲಕ ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿದ ಹನ್ನೆರಡನೇ ಶತಮಾನದ ವಚನಕಾರರ ಅಂದಿನ ಬದುಕು ವಿಶ್ಚವಿಭೂತಿಯಾಗಿದೆ. ವಚನಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಶ್ರೇಷ್ಠ ಸಾಹಿತ್ಯ ವನ್ನು ನೀಡಿದ ವಚನ ಸಾಹಿತ್ಯ ಪ್ರಾದೇಶಿಕತೆಯಿಂದ ಜಾಗತೀಕತೆಗೆ ತೆರೆದುಕೊಂಡ ಅಗ್ರಸಾಹಿತ್ಯವಾಗಿದೆ. ಸ್ವಾರ್ಥ ಹಿತವನ್ನು ಬದಿಗೊತ್ತಿ ಸಮಾಜದ ಹಿತಕ್ಕಾಗಿ ಜೀವ ಹಾಗೂ ಜೀವನ ವನ್ನು ಸವೆಸಿದ ವಚನಕಾರರು ಸೂರ್ಯ ಚಂದ್ರರು ಇರುವ ತನಕವೂ ಶ್ರೇಷ್ಠರಾಗಿಯೇ ಉಳಿಯುತ್ತಾರೆ ಎಮದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಸವರಾಜು, ಕನ್ನಡ ಪ್ರಾಧ್ಯಾಪಕ ಡಾ.ಪ್ರಭು, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ದಯಾನಂದ, ಕನ್ನಡ ಉಪನ್ಯಾಸಕ ಆರ್.ರಘುರಾಜ್, ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿದರು. ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು. ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿ ಸಾಧನೆ ತೋರಿದ ಡಾ.ದಿಲನ್ ಅವರನ್ನು ಕಾಲೇಜು ವತಿಯಿಂದ ಇದೇ ಸಂದರ್ಭ ಗೌರವಿಸಲಾಯಿತು.