

ಚಳ್ಳಕೆರೆ: ಸ್ಪರ್ಧಾ ಸಮಾಜದಲ್ಲಿ ಬದುಕು ರೂಪಿಸಿಕೊಳ್ಳುವ ರೀತಿಯಲ್ಲಿ ಮಕ್ಕಳನ್ನು ಪ್ರತಿಭಾವಂತರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಹೊಣೆಗಾರಿಕೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಮಂಜುನಾಥ ಹೇಳಿದರು.
ತಾಲೂಕಿನ ಕೆ.ಡಿ.ಕೋಟೆ ಗ್ರಾಮದ ಸರ್ವೋದಯ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೊಡ್ಡ ಉಳ್ಳಾರ್ತಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲಾಲೋಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.
ಪ್ರಸ್ತುತ ಶೈಕ್ಷಣಿಕ ಚಟುವಟಿಕೆಯಲ್ಲಿ ಪ್ರಗತಿಪರ ಬದಲಾವಣೆ ಇದೆ. ಇಲ್ಲಿ ಮಕ್ಕಳನ್ನು ಪ್ರಧಾನವಾಗಿ ಕಾಣಲಾಗುತ್ತಿದೆ. ಅವರಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸುವ ಚಟುವಟಿಕೆಗಳ ಅವಕಾಶವಿದೆ. ವಿದ್ಯಾರ್ಥಿಗಳು ಮುಕ್ತವಾಗಿ ಭಾಗವಹಿಸುವ ಮತ್ತು ಆದರ್ಶ ಅನುಕರಣೆಯ ನೆಲೆಯಲ್ಲಿ ಪ್ರತಿಭಾವಂತರಾಗಿ ಬೆಳೆಯಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯ ರೈತಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಪ್ರತಿಭಾ ಕಾರಂಜಿ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳ ಕಲಾವಂತಿಕೆಯನ್ನು ಗುರುತಿಸುತ್ತಿದೆ. ಇದರಿಂದ ಜಿಲ್ಲೆ ಮತ್ತು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಪರಿಚಯಿಸಬಹುದು. ಗುಣಮಟ್ಟ ಶಿಕ್ಷಣ ಕಲಿಕೆಗೆ ಶಿಕ್ಷಕರ ಪರಿಶ್ರಮ ಅಗತ್ಯವಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಆದರ್ಶವಾಗಿ ಬೆಳೆಸಬೇಕು ಎಂದು ತಿಳಿಸಿದರು.
ಸಿಆರ್‌ಪಿ ಎಚ್.ದಾದಾಪೀರ್ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ 14 ಶಾಲಾ ಮಕ್ಕಳು ಭಾಗವಹಿಸಲು ಅವಕಾಶ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆ ಪ್ರೋತ್ಸಾಹಿಸಲಾಗುವುದು. ಇದರಿಂದ ನಾಡಿನ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಮಹತ್ವ ತಿಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮುಖ್ಯಶಿಕ್ಷಕರಾದ ಕೆ.ಆರ್.ಹರೀಶ್, ಮಾರಣ್ಣ, ಈಶ್ವರೀಯ ವಿಶ್ವವಿದ್ಯಾನಿಲಯ ವಿಮಲಾ, ಶಿಕ್ಷಕರಾದ ಮೃತ್ಯುಂಜಯ, ಟಿ.ಜಯಲಕ್ಷ್ಮೀ, ಕುರುಗುಂಟಪ್ಪ, ಶಾಂತೇಶ್, ಮಂಜುಳಾ, ಬಿಂದುರಾಣಿ, ಸುಮಿತ್ರಮ್ಮ, ಪ್ರತಿಭಾ, ಗೀತಾ ಮತ್ತಿತರರು ಇದ್ದರು.