

ಮೈಸೂರು: ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿಸುವಲ್ಲಿ ಕೆಂಗಲ್ ಹನುಮಂತಯ್ಯ ಅವರ ಪಾತ್ರ ಪ್ರಮುಖವಾದದ್ದು ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷ ಎನ್.ಬೆಟ್ಟೇಗೌಡ ಹೇಳಿದರು.
ಕೆಂಗಲ್ ಹನುಮಂತಯ್ಯ ಜನ್ಮ ದಿನಾಚರಣೆ ಅಂಗವಾಗಿ ಶಿವರಾಂಪೇಟೆಯ ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕದ ಏಕೀಕರಣಕ್ಕೆ ಹೋರಾಟ ಮಾಡಿದವರಲ್ಲಿ ಕೆಂಗಲ್ ಹನುಮಂತಯ್ಯ ಅವರ ಪಾತ್ರ ಮಹತ್ವದ್ದು. ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿಸುವಲ್ಲಿ ಅವರು ಅವಿರತ ಶ್ರಮಿಸಿದರು. ಭಾಷೆಯಾಧಾರಿತ ರಾಜ್ಯ ನಿರ್ಮಾಣವನ್ನು ಬೆಂಬಲಿಸಿ 1955ರಲ್ಲಿ ‘ಮೈಸೂರು ವಿಧಾಯಕಸಭೆ’ಯಲ್ಲಿ ಅವರು ಮಾಡಿದ ಭಾಷಣವು ಐತಿಹಾಸಿಕವಾಗಿದೆ ಎಂದು ಬಣ್ಣಿಸಿದರು.
ಮೈಸೂರು ಮಹಾರಾಜ ಕಾಲೇಜಿನಿಂದ ಪದವಿ ಪಡೆದ ಹನುಂತಯ್ಯ ಅವರು, ವಿದ್ಯಾರ್ಥಿ ದಿಸೆಯಲ್ಲಿಯೇ ತಮ್ಮ ಉತ್ಸಾಹ ಮತ್ತು ಚುರುಕುತನವನ್ನು ಪ್ರದರ್ಶಿಸಿದ್ದರು. ವಿದ್ಯಾರ್ಥಿ ಸಂಘ ಮತ್ತು ಕರ್ನಾಟಕ ಸಂಘಗಳಿಗೆ ಕಾರ್ಯದರ್ಶಿಯಾಗಿ ಚುನಾಯಿತರಾಗಿ ಗಮನ ಸೆಳೆದಿದ್ದರು. ಮಹಾತ್ಮಾ ಗಾಂಧಿಯಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟಕ್ಕಿಳಿದು ಅದಮ್ಯ ಶಕ್ತಿ ಮತ್ತು ಅರ್ಪಣಾ ಮನೋಭಾವ ಮೆರೆದರು. ಈ ಹೋರಾಟದ ಅವಧಿಯಲ್ಲಿ ಅವರು ಏಳು ಬಾರಿ ಬಂಧನಕ್ಕೊಳಗಾದರು ಎಂದು ವಿವರಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ನಾಗರಾಜ್ ವಿ.ಬೈರಿ ಮಾತನಾಡಿ, ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ಜನರ ನಿಜವಾದ ನಾಯಕರಾಗಿದ್ದ ಹನುಮಂತಯ್ಯ ಅವರು ದಕ್ಷ ಆಡಳಿತ ನೀಡಿದ್ದರು. ಆ ಮೂಲಕ ರಾಜ್ಯದ ಏಳಿಗೆ ಮತ್ತು ಗ್ರಾಮೀಣ ಜನರ ಉದ್ಧಾರಕ್ಕೆ ದುಡಿದರು ಎಂದರು.
ದೂರದೃಷ್ಟಿಯುಳ್ಳ ನಾಯಕನಾಗಿ ಅವರು ಅನೇಕ ಸಾಧನೆಗಳನ್ನು ಮಾಡಿದರು. ಅದಕ್ಕೆ ಬೆಂಗಳೂರಿನಲ್ಲಿರುವ ಭವ್ಯ ವಿಧಾನಸೌಧ ಕಟ್ಟಡವೇ ಸಾಕ್ಷಿ. ದೇಶದಲ್ಲೆ ಅತೀ ದೊಡ್ಡದಾದ ಶಾಸಕಾಂಗ ಮತ್ತು ಆಡಳಿತ ಕಚೇರಿಯ ಕಟ್ಟಡವಿದು. ಇದರ ಕಲ್ಪನೆ ಮತ್ತು ನಿರ್ಮಾಣ ಪೂರ್ಣತಃ ಅವರದೇ. ದ್ರಾವಿಡ ಶೈಲಿಯ ಈ ‘ಗ್ರಾನೈಟ್ ಕಟ್ಟಡವನ್ನು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ‘ಈ ಕಟ್ಟಡವನ್ನು ನೋಡಿ ಮಂತ್ರಮುಗ್ಧನಾದೆ’ ಎಂದು ಹೇಳಿದ್ದಾರೆ ಎಂದು ನೆನಪಿಸಿಕೊಂಡರು.
ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕ ಪಡುವಾರಹಳ್ಳಿ ರಾಮಕೃಷ್ಣ ಮಾತನಾಡಿ, ಹನುಮಂತಯ್ಯ ಅವರು ವಿದ್ಯಾರ್ಥಿಯಾಗಿದ್ದಾಗ 1927ರ ಮದ್ರಾಸ್ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿ ರಾಜಕೀಯ ನಾಯಕನಾಗಿ ಅವರ ಬೆಳವಣಿಗೆಯಲ್ಲಿ ಈ ಘಟನೆ ಪ್ರಮುಖ ಪಾತ್ರ ವಹಿಸಿತು. ಒಂದು ವರ್ಷದ ನಂತರ, ಅವರು ಸೈಮನ್ ಆಯೋಗದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಮುನ್ನಡೆಸಿದರು. ರಾಜ್ಯ ಅಲ್ಲದೆ ಕೇಂದ್ರದಲ್ಲಿಯೂ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು ಎಂದು ವಿವರಿಸಿದರು.
ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಚಂದ್ರಶೇಖರ್, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಎನ್.ಪ್ರಕಾಶ್, ಮುಖಂಡರಾದ ನಜರ್‌ಬಾದ್ ರಾಜು, ಪದ್ಮಾ ಇತರರು ಇದ್ದರು.