

ತೀರ್ಥಹಳ್ಳಿ: ಮಲೆನಾಡಿನ ಜನರ ಬದುಕಿಗೆ ಮರಣಶಾಸನದಂತಿರುವ ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಅಭಿಪ್ರಾಯ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ ಖಂಡನೀಯ. ಈ ಬಗ್ಗೆ ಸರ್ಕಾರದ ನಿಲುವೇನು ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ತೀರ್ಥಹಳ್ಳಿ ಮಂಡಲದಿAದ ಮಂಗಳವಾರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಅರಣ್ಯದ ಬಗ್ಗೆ ಕನಿಷ್ಠ ಕಾಳಜಿ ಇಲ್ಲದವರೇ ಈ ಖಾತೆಯ ಮಂತ್ರಿಗಳಾಗುವುದು ದುರಂತ. ಅರಣ್ಯ ಸಚಿವರು ಕಸ್ತೂರಿ ರಂಗನ್ ವರದಿ ಕುರಿತು ನೀಡಿರುವ ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಅರಣ್ಯಕ್ಕೆ ಸಂಬAಽಸಿದ ಅನೇಕ ಕಾಯ್ದೆಗಳು ಈ ಭಾಗದ ರೈತರು ಮತ್ತು ಜನರನ್ನು ಕಾಡುತ್ತಿವೆ. ಸ್ಥಳ ಪರಿಶೀಲನೆ ಮಾಡದೆ ವೈಮಾನಿಕ ಸಮೀಕ್ಷೆಯೊಂದಿಗೆ ನೀಡಿರುವ ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ. ಮಲೆನಾಡಿನ ಜನರ ಮೇಲಿನ ತೂಗುಗತ್ತಿ. ಕೊಡಗು, ಚಿಕ್ಕಮಗಳೂರು, ಉತ್ತರಕನ್ನಡ ಹಾಗೂ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಿಂದ ಆಯ್ಕೆಯಾಗಿರುವ ಶಾಸಕರು ಈ ಬಗ್ಗೆ ಚಿಂತನೆ ನಡೆಸಬೇಕಿದೆ. ಒಂದೊಮ್ಮೆ ಈ ವರದಿ ಜಾರಿಯಾದರೆ ಮಲೆನಾಡು ಭಾಗದ ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆಯಾಗುತ್ತದೆ. ರಸ್ತೆ, ನೀರು ಮುಂತಾದ ಮೂಲ ಕಾರ್ಯಗಳಿಗೂ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಾದ ದುಸ್ಥಿತಿ ಎದುರಾಗಲಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಅಮೃತ್ ಆತ್ರೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಪಕ್ಷದ ಪ್ರಮುಖರಾದ ಸಾಲೇಕೊಪ್ಪ ರಾಮಚಂದ್ರ, ಹೆದ್ದೂರು ನವೀನ್, ಆರ್.ಮದನ್, ಹುಲ್ಕೋಡು ಮಹೇಶ್, ಕೆ.ನಾಗರಾಜ ಶೆಟ್ಟಿ, ಬೇಗುವಳ್ಳಿ ಸತೀಶ್, ಗೀತಾ ಶೆಟ್ಟಿ, ತಳಲೆ ಪ್ರಸಾದ್ ಶೆಟ್ಟಿ, ರಕ್ಷಿತ್ ಮೇಗರವಳ್ಳಿ, ಮಧು ಹೆಗ್ಡೆ ಹಾಗೂ ಬಿ.ಆರ್.ಮೋಹನ್ ಇದ್ದರು.
ಪಶ್ಚಿಮಘಟ್ಟ ಪ್ರದೇಶದಲ್ಲಿರುವುದು ಕೇವಲ ಕಾಡಲ್ಲ. ಇಲ್ಲಿ ಜನವಸತಿ ಪ್ರದೇಶವೂ ಇದೆ ಎಂಬುದನ್ನು ಅರಿಯದೆ ಕಸ್ತೂರಿ ರಂಗನ್ ವರದಿ ತಯಾರಿಸಲಾಗಿದೆ. ಈ ವರದಿಯನ್ನು ವಜಾಗೊಳಿಸುವಂತೆ ಕೇಂದ್ರ ಸರ್ಕಾರ ಮತ್ತು ಹಸಿರು ಪೀಠದ ಮುಂದೆ ರಾಜ್ಯ ಸರ್ಕಾರ ತನ್ನ ವಾದ ಮಂಡಿಸಬೇಕು. ಸರ್ಕಾರ ಇದರಲ್ಲಿ ವಿಫಲವಾದರೆ ನಾವು ಬೀದಿಗಿಳಿದು ನಮ್ಮ ಪ್ರದೇಶವನ್ನು ಉಳಿಸಿಕೊಳ್ಳುತ್ತೇವೆ.| ಆರಗ ಜ್ಞಾನೇಂದ್ರಶಾಸಕ