ಕೆಎಸ್‌ಸಿಎ ಮೈಸೂರು ವಲಯದ ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯದ ಆರೋಪ; ಅರ್ಹ ಪ್ರತಿಭೆಗಳಿಗೆ ಅವಕಾಶ ನಿರಾಕರಣೆ

club-cricket-ball
Published on

ಮೈಸೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ(ಕೆಎಸ್‌ಸಿಎ)ಧಾರವಾಡ ವಲಯದ ಬಳಿಕ ಇದೀಗ ಮೈಸೂರು ವಲಯದ ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕೆಎಸ್‌ಸಿಎ ಮೈಸೂರು ವಲಯವು ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯ ನಡೆಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಬಹಳಷ್ಟು ಅರ್ಹ ಪ್ರತಿಭೆಗಳಿಗೆ ಅವಕಾಶ ವಂಚಿಸಲಾಗಿದೆ. 19, 16 ಹಾಗೂ 14 ವಯೋಮಿತಿಯ ವಿಭಾಗದ ಆಯ್ಕೆ ಪ್ರಕ್ರಿಯೆಯಲ್ಲಿ ಮೈಸೂರು ವಲಯ ಸಂಚಾಲಕ ಹರಿಕೃಷ್ಣಕುಮಾರ್ ಅವರು ತಾರತಮ್ಯ ಮಾಡುತ್ತಿದ್ದಾರೆ ಎಂದು ಆಟಗಾರರೊಬ್ಬರ ಪಾಲಕ ಲೋಕೇಶ್ ವಿಜಯವಾಣಿಗೆ ತಿಳಿಸಿದರು.

ಮುಖ್ಯವಾಗಿ ಇತ್ತೀಚೆಗೆ ನಡೆದ 19 ಮತ್ತು 23 ವಯೋಮಿತಿಯ ಆಯ್ಕೆ ಪ್ರಕ್ರಿಯೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ವಿಭಾಗದಲ್ಲಿ ಆಯ್ಕೆಯಾದ ಆಟಗಾರರ ಪಟ್ಟಿ ಮಾಡಲಾಗಿದೆ. ಇದರಲ್ಲಿ ಕಳೆದ ವರ್ಷದಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಬಹುತೇಕ ಆಟಗಾರರಿಗೆ ಅವಕಾಶವನ್ನು ನಿರಾಕರಿಸಲಾಗಿದೆ. 5 ರಿಂದ 6 ಆಟಗಾರರನ್ನು ಯಾವುದೇ ಹಂತದಲ್ಲಿ ಸರಿಯಾಗಿ ಸಾಧನೆ ಮಾಡದಿದ್ದರೂ ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ಆಯ್ಕೆ ಪ್ರಕ್ರಿಯೆಯಲ್ಲಿ ಏನು ಮಾನದಂಡ ಅನುಸರಿಸಿದ್ದಾರೆ ಎಂದು ಪ್ರಶ್ನಿಸಿದರು.

ಮೈಸೂರು ವಲಯ ವ್ಯಾಪ್ತಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆ ಸೇರುತ್ತದೆ. ಸುಮಾರು 32 ವಿವಿಧ ಕ್ಲಬ್‌ಗಳಿಂದ 75 ಪ್ರತಿಭೆಗಳನ್ನು ಮೊದಲ ಸುತ್ತಿನಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಉತ್ತಮ ಪ್ರದರ್ಶನ ನೀಡಿದ 32 ಆಟಗಾರರನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಿಕೊಳ್ಳಬೇಕು. ಇವರಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರತಿಭಾನ್ವಿತ 15 ಆಟಗಾರರನ್ನು ಆಯ್ಕೆ ಮಾಡಬೇಕು. ಉಳಿದವರನ್ನು ಸ್ಟಾಂಡ್ ಬೈ ಆಟಗಾರರಾಗಿ ಮಾಡಬೇಕು. ಆದರೆ ಸಂಚಾಲಕ ಹರಿಕೃಷ್ಣಕುಮಾರ್ ಅವರು ತಮಗಿಷ್ಟ ಬಂದ ಹಾಗೆ ಆಯ್ಕೆ ಪ್ರಕ್ರಿಯೆ ವಿಧಾನವನ್ನು ರಾತ್ರೋರಾತ್ರಿ ಬದಲಾಯಿಸಿ, ತಮಗಿಷ್ಟ ಬಂದ ಆಟಗಾರರನ್ನು ಆಯ್ಕೆ ಮಾಡಿದ್ದಾರೆ ಎಂದು ದೂರಿದರು.

2016-17ನೇ ಮತ್ತು ಅದಕ್ಕೂ ಮೊದಲು ವಿವಿಧ ವಯೋಮಿತಿಯ ಹಂತದಲ್ಲಿ ಆಡುವ ಆಟಗಾರರಿಗೆ ಏಪ್ರಿಲ್, ಮೇ ತಿಂಗಳಲ್ಲಿ 24 ಆಟಗಾರರನ್ನು ಆಯೆ ಮಾಡಲಾಗುತ್ತಿತ್ತು. ಬಳಿಕ ಅವರಿಗೆ ಸುಮಾರು 6 ರಿಂದ 9 ತಿಂಗಳು ಕೆಎಸ್‌ಸಿಎನಲ್ಲಿ ತರಬೇತಿ ನೀಡುತ್ತಿದ್ದರು. ಆ ಸಮಯದಲ್ಲಿ ತರಬೇತಿ ಪಡೆದಿದ್ದ ನಿಕಿನ್ ಜೋಸ್, ಕಿಶನ್ ಬೆದಾರೆ, ಎಂ.ವೆಂಕಟೇಶ್, ಎಲ್.ಆರ್.ಚೇತನ್, ಕೃತಿಕ್ ಕೃಷ್ಣ, ಮನ್ವಂತ್‌ಕುಮಾರ್… ಹೀಗೆ ಹಲವು ಯುವ ಪ್ರತಿಭೆಗಳು ನಮ್ಮ ರಾಜ್ಯ ಮತ್ತು ಕೆಪಿಎಲ್‌ನಲ್ಲಿ ಮಿಂಚಿದ್ದಾರೆ. ಆದರೆ ಇತ್ತೀಚೆಗೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಿದ್ದ ಅನೇಕ ಪ್ರತಿಭೆಗಳಿಗೆ ಅವಕಾಶ ಇಲ್ಲದಂತಾಗಿದೆ ಎಂದು ಲೋಕೇಶ್ ಆರೋಪಿಸಿದರು.

ಹರಿಕೃಷ್ಣಕುಮಾರ್ ಅವರು ಈ ವರ್ಷದ ವಿವಿಧ ವಯೋಮಿತಿಯ ತಂಡಗಳ ಆಯ್ಕೆಯಲ್ಲಿ ಎಷ್ಟು ಪಾರದರ್ಶಕತೆ ಇದೆ ಎಂಬುದನ್ನು ನೋಟಿಸ್ ಬೋರ್ಡ್‌ನಲ್ಲಿ ಪ್ರದರ್ಶಿಸಬೇಕು. ಇಲ್ಲದಿದ್ದರೆ ನೊಂದ ಪಾಲಕರು ಪ್ರತಿಭಟನೆ ಮಾಡುತ್ತೇವೆ. ಅಲ್ಲದೆ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ದೂರು ಕೊಡಲಾಗುತ್ತದೆ ಎಂದು ಲೋಕೇಶ್ ಎಚ್ಚರಿಸಿದ್ದಾರೆ.

2024-25ನೇ ಸಾಲಿನಲ್ಲಿ ಉಳೊಇದ ವಯೋಮಿತಿಯ ಆಯ್ಕೆ ಪ್ರಕ್ರಿಯೆಯು ಯಾವ ರೀತಿ ಮಾಡಲಾಗುತ್ತದೆ. ಆಯ್ಕೆಯ ಮಾನದಂಡ ಏನು ಎಂಬುದನ್ನು ಈಗಲೇ ಕೆಎಸ್‌ಸಿಎ ಕಚೇರಿ ನೋಟಿಸ್ ಬೋರ್ಡ್‌ನಲ್ಲಿ ಹಾಕಬೇಕು. 2025-26ನೇ ಸಾಲಿನ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವುದನ್ನು ಮುಂಚಿತವಾಗಿ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆಟಗಾರರ ಆಯ್ಕೆಯಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಆಟಗಾರರ ಪ್ರತಿಭೆ ಆಧರಿಸಿ ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ. ಆರೋಪದಲ್ಲಿ ಹುರಳಿಲ್ಲ. ಆಟಗಾರರ ಪ್ರತಿಭೆ, ಸಾಧನೆ ಮತ್ತು ಫಿಟ್ನೆಸ್ ಟೆಸ್ಟ್ ಮೂರು ಮಾನದಂಡಗಳ ಮೂಲಕ ಆಯ್ಕೆ ಮಾಡಲಾಗಿದೆ. ಕೆಎಸ್‌ಸಿಎ ವೀಕ್ಷಕರೊಬ್ಬರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಆಟಗಾರರು ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಫಿಟ್ನೆಸ್ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಯಾರು ಕೂಡ ಹತಾಶರಾಗುವುದು ಬೇಡ. ಫಿಟ್ನೆಸ್ ಜತೆಗೆ ಉತ್ತಮ ಪ್ರದರ್ಶನ ನೀಡಿದರೆ ಅವಕಾಶ ಸಿಕ್ಕೇ ಸಿಗುತ್ತದೆ.ಹರಿಕೃಷ್ಣಕುಮಾರ್, ಸಂಚಾಲಕ, ಕೆಎಸ್‌ಸಿಎ ಮೈಸೂರು ವಲಯ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ(ಕೆಎಸ್‌ಸಿಎ) ಮೈಸೂರು ವಲಯದ ಆಟಗಾರರ ವಿವಿಧ ವಯೋಮಿತಿ ವಿಭಾಗದಲ್ಲಿ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯ ನಡೆದಿದೆ. ಅರ್ಹ ಪ್ರತಿಭೆಗಳು ಅವಕಾಶದಿಂದ ವಂಚಿತರಾಗಿದ್ದಾರೆ. ಅವರಿಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಲು ರಾತ್ರೋರಾತ್ರಿ ಫಿಟ್ನೆಸ್ ಟೆಸ್ಟ್ ಬಗ್ಗೆ ತೀರ್ಮಾನಿಸಲಾಗಿದೆ. ಇದುವರೆಗೆ ಮಾಡದ ಫಿಟ್ನೆಸ್ ಟೆಸ್ಟ್‌ನ್ನು ಈ ಬಾರಿ ಏಕೆ ಮಾಡಲಾಯಿತು?ಲೋಕೇಶ್, ನೊಂದ ಪೋಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net