ಅದ್ದೂರಿಯಾಗಿ ನಡೆದ ಹುಳಿಮಾವು ರೇಣುಕಾದೇವಿ ಹೂವಿನ ಕರಗ ಮಹೋತ್ಸವ

New Project
Published on

ಬೆಂಗಳೂರು: ನಗರದ ಹೊರ ವಲಯ ಹುಳಿಮಾವು ಗ್ರಾಮದ ರೇಣುಕಾ ಎಲ್ಲಮ್ಮ ದೇವಿಯ ಹೂವಿನ ಕರಗ ಉತ್ಸವ ಬುಧವಾರ ಮಧ್ಯರಾತ್ರಿ ಅದ್ದೂರಿಯಾಗಿ ನಡೆಯಿತು. ಸುತ್ತಮುತ್ತಲಿನ 40 ದೇವರುಗಳ ಹೂವಿನ ಪಲ್ಲಕ್ಕಿ, ಮುತ್ತಿನ ರಥಗಳ ಮೆರವಣಿಗೆ ನೆರೆದ ಜನರ ಗಮನ ಸೆಳೆಯಿತು.

ಅರ್ಚಕ ಮಂಜುನಾಥ್ ನಿಗದಿತ ಪೂಜಾ ಕಾರ್ಯಕ್ರಮಗಳನ್ನು ಪೂರೈಸಿ ರೇಣುಕಾ ಎಲ್ಲಮ್ಮ ದೇವಸ್ಥಾನಕ್ಕೆ ಬಂದು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡಿದ್ದ ರೇಣುಕಾ ಎಲ್ಲಮ್ಮ ದೇವಿ ಕರಗ ಉತ್ಸವಕ್ಕೆ ಚಾಲನೆ ದೊರೆಯಿತು. ದೇವಸ್ಥಾನದಿಂದ ಹೊರಟ ಕರಗ ಕೋದಂಡರಾಮಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸ್ವೀಕರಿಸಿ, ದೇವಸ್ಥಾನದ ಆವರಣದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಮುಂದೆ ಸಾಗಿತು. ನೆರೆದಿದ್ದ ಸಹಸ್ರಾರು ಭಕ್ತರು ಕರಗದ ಮೇಲೆ ಮಲ್ಲಿಗೆ ಹೂವನ್ನು ಚೆಲ್ಲಿ ಭಕ್ತಿ ಮೆರೆದರು

ಪದ್ಧತಿಯಂತೆ ವಿವಿಧ ಸಮುದಾಯದವರಿಂದ ಪೂಜೆ ಸ್ವೀಕರಿಸಿದ ಕರಗವು ನಂತರ ಸೋಮೇಶ್ವರ ದೇವಸ್ಥಾನ, ಕೆಂಪಮ್ಮ, ಮುತ್ತರಾಯ ಸ್ವಾಮಿ, ಆಂಜನೇಯ, ವಿನಾಯಕ, ದೊಡ್ಡಮ್ಮ ದೇವಿ, ವೆಂಕಟರಮಣ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಮುಂಜಾನೆ ಸಮಾಪ್ತಿಯಾಯಿತು.

ಉತ್ಸವದಲ್ಲಿ ಕೋದಂಡರಾಮಸ್ವಾಮಿ ದೇವಸ್ಥಾನ ಧರ್ಮದರ್ಶಿ ಮಂಡಳಿಯ ಸಿ. ಲಕ್ಷ್ಮೀ ನಾರಾಯಣ, ಧರ್ಮದರ್ಶಿಗಳಾದ ಆರ್.ಶರಶ್ಚಂದ್ರ, ಎಚ್ .ಕೆ. ರಾಮ್ ಸ್ವಾಮಿ ರೆಡ್ಡಿ, ಟಿ. ಶ್ರೀನಿವಾಸ್ ರೆಡ್ಡಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net