

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ 1985ರಿಂದಲೂ ನಗರಸಭೆಯಲ್ಲಿ ಕನ್ನಡ ಪಕ್ಷದ ಸದಸ್ಯರು ಆಯ್ಕೆಯಾಗುತ್ತಾ ಬಂದಿದ್ದಾರೆ. ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಕನ್ನಡ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಹೇಳಿದರು.
ನಗರದ ಕನ್ನಡ ಜಾಗೃತಿ ಪರಿಷತ್‌ನಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡಪರ ಮುಖಂಡರ ಸಭೆಯಲ್ಲಿ ಮಾತನಾಡಿದರು. ಚುನಾವಣೆಗಳಲ್ಲಿ ಸ್ಪರ್ಧಿಸುವಂಥ ಶಕ್ತಿ ಕನ್ನಡಿಗರಿಗೆ ಬರಬೇಕು, ಯುವಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಗಳಲ್ಲಿ ಭಾಗಿಯಾಗಬೇಕು ಎಂದರು.
ಕನ್ನಡವನ್ನು ಉಳಿಸಿಕೊಳ್ಳಬೇಕಾದರೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ನಗರಸಭೆಗೆ ಆಯ್ಕೆಯಾಗಬೇಕು. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕನ್ನಡಪರ ಹೋರಾಟಗಾರರು ಸ್ಪರ್ಧಿಸಲಿದ್ದಾರೆ. ಭ್ರಷ್ಟಾಚಾರರಹಿತ ಆಡಳಿತದೊಂದಿಗೆ ರಾಜ್ಯವನ್ನು ನಡೆಸಲಿದ್ದೇವೆ. ವೈಮನಸ್ಸುಗಳನ್ನು ಬಿಟ್ಟು ಎಲ್ಲ ಕನ್ನಡಪರ ಹೋರಾಟಗಾರರು ಒಂದೇ ವೇದಿಕೆಯಡಿ ಬರುವಂತೆ ಹೇಳಿದ್ದೇನೆ ಎಂದು ಹೇಳಿದರು.
ರೈತರ ಹೋರಾಟಕ್ಕೆ ಬೆಂಬಲ: ಕಲ್ಲು ಗಣಿಗಾರಿಕೆಯಲ್ಲಿ ಎಲ್ಲ ರಾಜಕೀಯ ನಾಯಕರೇ ತುಂಬಿದ್ದಾರೆ. ಯಡಿಯೂರಪ್ಪ ಸರ್ಕಾರ ಬಂದಿರುವುದೇ ಗಣಿ ಮಾಲೀಕರಿಂದ. ಸಿಎಂ ಯಡಿಯೂರಪ್ಪ ಅವರು ಭ್ರಷ್ಟರ ಬೆನ್ನಿಗೆ ನಿಂತಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್ ಕುಮ್ಮಕ್ಕಿನಿಂದ ರೈತರ ವಿರೋಧಿ ಕಾನೂನುಗಳು ಜಾರಿಗೆ ಬರುತ್ತಿವೆ. ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇನೆ ಎಂದು ವಾಟಾಳ್ ತಿಳಿಸಿದರು.
ರೈಲು ಸಂಚಾರ ಬಂದ್: ಜ.30ರೊಳಗೆ ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕು. ಮರಾಠ ಪ್ರಾಧಿಕಾರ ರದ್ದು ಮಾಡಬೇಕು. ಇಲ್ಲವಾದರೆ, ರೈಲು ಸಂಚಾರ್ ಬಂದ್ ಮಾಡಲಾಗುವುದು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಗೆ ಅವಕಾಶ ಕೊಡುವುದಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು.