ನಮ್ಮೆಲ್ಲರ ಅಸ್ಮಿತೆಯೇ ಕನ್ನಡ ಭಾಷೆ

06.Pyp. 01.
ಪಿರಿಯಾಪಟ್ಟಣ ತಾಲೂಕಿನ ಗಂಗಾಧರ ಬಸವನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿದರು. ಜಿ.ಎಂ.ನಾರಾಯಣ, ನಾಗರಾಜ್, ಯೋಗೇಶ್, ಸಚ್ಚಿದಾನಂದ ಇತರರು ಇದ್ದರು.
Published on

ಪಿರಿಯಾಪಟ್ಟಣ : ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಕನ್ನಡ ಭಾಷೆ ಕನ್ನಡಿಗರ ಅಸ್ಮಿತೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ತಿಳಿಸಿದರು.

ತಾಲೂಕಿನ ಗಂಗಾಧರ ಬಸವನಹಳ್ಳಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಾಮ ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆ ಪ್ರತಿಯೊಬ್ಬರ ಕನ್ನಡಿಗರ ಹೃದಯ ಬಡಿತವಾಗಿದ್ದು, ಭಾಷೆಗೆ ಧಕ್ಕೆ ಬಂದಲ್ಲಿ ಕನ್ನಡಿಗರು ಹೋರಾಟದ ಹಾದಿ ಹಿಡಿಯುವುದಕ್ಕೆ ಹಿಂಜರಿಯುವುದಿಲ್ಲ. ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಮೂರು ಗುಂಟೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದು ಮುಂದಿನ ದಿನಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಇಲ್ಲಿಯೇ ನಡೆಯಲಿವೆ. ಈ ಸ್ಥಳ ಮಂಜೂರಾತಿಗೆ ಸಾಕಷ್ಟು ಕನ್ನಡ ಅಭಿಮಾನಿಗಳು ಕಾರ್ಯಕರ್ತರು ಶ್ರಮಿಸಿದ್ದಾರೆ ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಗಂಗಾಧರ ಬಸವನಹಳ್ಳಿ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣವಾಗಬೇಕು ಎಂಬ ಬಗ್ಗೆ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಉನ್ನತ ಜ್ಞಾನಾರ್ಜನೆಗೆ ಮತ್ತು ಉದ್ಯೋಗವನ್ನು ಪಡೆಯಲು ಪೂರಕವಾದ ಪುಸ್ತಕಗಳನ್ನು ಅಧ್ಯಯನ ಮಾಡಬೇಕು, ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನೆರವು ನೀಡುವುದಾಗಿ ಭರವಸೆ ನೀಡಿದರು. ಗ್ರಂಥಾಲಯಕ್ಕೆ ಅಗತ್ಯವಿರುವ ಉತ್ತಮ ಪುಸ್ತಕಗಳು ಮತ್ತು ದಿನಪತ್ರಿಕೆಗಳ ವ್ಯವಸ್ಥೆಯನ್ನು ವೈಯಕ್ತಿಕವಾಗಿ ಮಾಡುತ್ತೇನೆ. ಸಾಹಿತ್ಯ ಪರಿಷತ್ತಿಗೆ ಸರ್ಕಾರದಿಂದ ಯಾವುದೇ ಅನುದಾನ ಬರುವುದಿಲ್ಲ, ಕನ್ನಡ ಅಭಿಮಾನಿಗಳು ಮತ್ತು ಇತರರ ಆರ್ಥಿಕ ನೆರವಿನ ಮೂಲಕವೇ ಬೇಕಾಗುವ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಣ ಮಾಡಲು ಸಾಧ್ಯ ಎಂದು ತಿಳಿಸಿದರು.

ನವೋದಯ ಫೌಂಡೇಶನ್ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಜಿ.ಎಂ.ನಾರಾಯಣ ಮಾತನಾಡಿ, ಕನ್ನಡ ರಾಜ್ಯೋತ್ಸವವೆಂಬುದು ಕನ್ನಡ ನಾಡಿನ ಪ್ರತಿಯೊಬ್ಬರ ಮನೆಯ ಹಬ್ಬವಾಗಬೇಕಾಗಿದೆ. ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಕನ್ನಡ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ ಎಂದು ನಾವೆಲ್ಲರೂ ಭಾವಿಸಬೇಕು, 9 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ರಾಷ್ಟ್ರದ ಏಕೈಕ ಭಾಷೆ ಎಂಬ ಹೆಗ್ಗಳಿಕೆ ನಮ್ಮ ಕನ್ನಡದ್ದಾಗಿದೆ. ರಾಷ್ಟ್ರಕವಿ ಕುವೆಂಪು ರವರು ಸರ್ವ ಜನಾಂಗದ ಶಾಂತಿಯ ತೋಟದ ಸಂದೇಶವನ್ನು ವಿಶ್ವಕ್ಕೆ ಸಾರಿದ್ದಾರೆ. ಪ್ರತಿಯೊಬ್ಬರು ಸಹೋದರತೆ ಮತ್ತು ಸಾಮರಸ್ಯದಿಂದ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಮಹನೀಯರ ಸಂದೇಶವನ್ನು ಆದರ್ಶವಾಗಿ ಮೈಗೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಚಿಟ್ಟೇನಹಳ್ಳಿ ಪಿಎಸಿಸಿಎಸ್ ನಿರ್ದೇಶಕ ನಾಗರಾಜ್, ಪಿಡಿಒ ಯೋಗೇಶ್ ಮತ್ತು ಸಚ್ಚಿದಾನಂದ ಮಾತನಾಡಿದರು. ಕಸಾಪ ಗ್ರಾಮ ಘಟಕದ ವತಿಯಿಂದ ಏರ್ಪಡಿಸಿದ್ದ ಕನ್ನಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಸಾಪ ಗ್ರಾಮ ಘಟಕದ ಅಧ್ಯಕ್ಷ ಜಿ.ಟಿ.ಅಶೋಕ್,ಉಪಾಧ್ಯಕ್ಷ ಪೋತರಾಜ್, ಕಾರ್ಯದರ್ಶಿ ಶಿವಕುಮಾರ್, ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಪುನೀತ್, ಉಪಾಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ಶಿವಕುಮಾರ್, ಸದಸ್ಯರಾದ ರಾಘು, ನವೀನ್, ನಂದೀಶ್, ಪುನೀತ್ ಕುಮಾರ್, ಶಾಲಾ ಮುಖ್ಯ ಶಿಕ್ಷಕ ತಮ್ಮೆಗೌಡ, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕಟ್ಟಪ್ಪ, ನಿರ್ದೇಶಕ ಪ್ರಕಾಶ್, ಶಿವಣ್ಣ, ಜವರಪ್ಪ, ಕಾಳೆಗೌಡ, ಲಕ್ಷ್ಮಣ, ಕೃಷ್ಣ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net