

ಧಾರವಾಡ: ನಾವು ಬರೀ ರಸ್ತೆ, ದೊಡ್ಡ ದೊಡ್ಡ ಕಟ್ಟಡ, ಮಾಲ್‌ಗಳನ್ನು ನಿರ್ಮಿಸುವುದರ ಮೂಲಕ ಸ್ಮಾರ್ಟ್‌ಸಿಟಿ ಮಾಡಿದರೆ ಸಾಲದು. ಇವುಗಳ ಜತೆಗೆ ಜ್ಞಾನ ನೀಡುವ ಎಲ್ಲ ಕಲೆಗಳನ್ನು ಉಳಿಸಲು ಶ್ರಮಿಸಬೇಕು. ಅಂದಾಗ ಮಾತ್ರ ಕನ್ನಡ ಭಾಷೆ ಇನ್ನೂ ಹೆಚ್ಚು ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕೀರ್ತಿನಾಥ ಕುರ್ತಕೋಟಿ ಅವರು ದ.ರಾ ಬೇಂದ್ರೆ ಅವರ ಮೇಲೆ ಬರೆದ ಸಮಗ್ರ ಸಂಪುಟ ‘ವಾಗರ್ಥ’ ಹಾಗೂ ಡಾ. ಕಮಲಾಕರ ಭಟ್ ಅವರು ಇಂಗ್ಲಿಷ್‌ಗೆ ಅನುವಾದಿಸಿದ ಆಯ್ದ ಬರಹಗಳ ಗ್ರಂಥ ‘ಕರ್ಟಸಿ ಆ್ ಕ್ರಿಟಿಸಿಸಂ’ ಬಿಡುಗಡೆ ಮಾಡಿ ಮಾತನಾಡಿದರು.
ಕೀರ್ತಿನಾಥ ಕುರ್ತಕೋಟಿ ಅವರು ಅನೇಕ ಅತ್ಯುತ್ತಮ ಕೃತಿಗಳನ್ನು ಹೊರ ತಂದಿದ್ದಾರೆ. ಕುರ್ತಕೋಟಿ ಅವರು ರಾಜ್ಯದ ಹೊರಗಡೆ ಇದ್ದರೂ ಕೂಡ ಕನ್ನಡಕ್ಕಾಗಿ ಬಹಳಷ್ಟು ದುಡಿದರು. ಅವರ ನೆನಪು ಸ್ಥಿರಸ್ಥಾಯಿಗೊಳಿಸಲು ನಾವೆಲ್ಲ ಪ್ರಯತ್ನ ಮಾಡೋಣ. ಧಾರವಾಡದ ಮನೋಹರ ಗ್ರಂಥಮಾಲೆ ರಾಜ್ಯದ ದಿಗ್ಗಜ ಲೇಖಕರ ಕೃತಿಗಳನ್ನು ಪ್ರಕಟಿಸುವುದರ ಮೂಲಕ, ಮಹಾನ್ ಕಾರ್ಯವನ್ನು ಮಾಡುತ್ತಿದೆ. ಸ್ಥಾಪಕ ಜಿ.ಬಿ.ಜೋಶಿ ಗದಗ ಹತ್ತಿರದ ಹೊಂಬಳದವರು. ಅವರನ್ನು ಕೂಡ ಹತ್ತಿರದಿಂದ ನೋಡಿದ ಭಾಗ್ಯ ನಮ್ಮದು ಎಂದರು.
ಸೂರ್ಯಪ್ರಕಾಶ ಪಂಡಿತ ಮಾತನಾಡಿ, ಕುರ್ತಕೋಟಿ ಅವರನ್ನು ಸಮಗ್ರವಾಗಿ ಅರ್ಥೈಸಿಕೊಳ್ಳುವ ಅವಶ್ಯಕತೆ ಇದೆ. 5-6 ಭಾಷೆಗಳ ಮೇಲೆ ಪ್ರಭುತ್ವ ಹೊಂದಿದ್ದ ಕುರ್ತಕೋಟಿ ಅವರು, ಸೃಜನಶೀಲ ವಿಮರ್ಶೆ ಹೇಗೆ ಮಾಡಬಹುದು ಎನ್ನುವುದನ್ನು ಬರಹಗಳ ಮೂಲಕ ತೋರಿಸಿದ್ದಾರೆ ಎಂದರು.
ಇಂಗ್ಲಿಷ್ ಪ್ರಾಧ್ಯಾಪಕ ಡಾ. ಕಮಲಾಕರ ಭಟ್, ನಿವೃತ್ತ ಪ್ರಾಧ್ಯಾಪಕ ಡಾ.ವಿ.ಟಿ.ನಾಯಕ, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್‌ನ ಡಾ. ಕೃಷ್ಣ ಕಟ್ಟಿ ಮತ್ತು ಮನೋಹರ ಗ್ರಂಥಮಾಲೆ ಸಮೀರ ಜೋಶಿ ಇದ್ದರು. ಡಾ.ಹಾ.ವೆಂ. ಕಾಖಂಡಕಿ ನಿರೂಪಿಸಿದರು. ಜಯತೀರ್ಥ ಜಹಗೀರದಾರ ವಂದಿಸಿದರು.