

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮನ್ವಯ ಕವಿ ಚೆನ್ನವೀರ ಕಣವಿ ಬದುಕು ಕಟ್ಟಿಕೊಂಡದ್ದು ಧಾರವಾಡದಿಂದಲೇ. ಇಂದಿನ ಯುವ ಪೀಳಿಗೆ ಇಂತಹ ಉತ್ಕೃಷ್ಟ ಸಾಹಿತಿಗಳಿಂದ ಪ್ರೇರಣೆ ಪಡೆದು ಸಾಹಿತ್ಯ ರಚಿಸಬೇಕು ಎಂದು ವಿಮರ್ಶಕ ಡಾ ಜಿ. ಎಂ. ಹೆಗಡೆ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ನಾಡೋಜ ಡಾ. ಚೆನ್ನವೀರ ಕಣವಿ ಕಾವ್ಯ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಣವಿ ದಂಪತಿ ಯುವ ಬರಹಗಾರರಿಗೆ ಪ್ರೇರಣೆಯಾಗಿದ್ದಾರೆ. ದಂಪತಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಕಾವ್ಯದ ಕಣಜವಾಗಿರುವ ಅವರು ಕಾವ್ಯ ಪರಂಪರೆಯನ್ನೇ ಸೃಷ್ಟಿಸಿದ್ದಾರೆ ಎಂದರು.
ಹಿರಿಯ ಸಾಹಿತಿ ಡಾ. ಬಸು ಬೇವಿನಗಿಡದ ಮಾತನಾಡಿ, ಶಾಂತಾದೇವಿ ಕಣವಿಯವರು ಸ್ತ್ರೀ-ಸಂವೇದನೆಗಳ ಕುರಿತು ಅನೇಕ ಕಥೆಗಳನ್ನು ಕಥಾಲೋಕಕ್ಕೆ ನೀಡಿದ್ದಾರೆ ಎಂದರು.
ಡಾ. ರಾಜೇಶ್ವರಿ ಮಹೇಶ್ವರಯ್ಯ ಬಹುಮಾನ ವಿತರಿಸಿದರು. ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆಯಲ್ಲಿ ಬಬಲೇಶ್ವರ ತಾಲೂಕ ಜೈನಾಪುರದ ಸುನೀತಾ ಗುರಯ್ಯ ಗಣಾಚಾರಿ ಅವರ ನೆನಪಾಗಿ ನನ್ನ ಪ್ರೇಮದ ಬದುಕು ಕಾವ್ಯ ಪ್ರಥಮ, ದಾವಣಗೆರೆಯ ಸೃಜನ ಬಿ.ಎನ್. ಅವರ ಧರ್ಮಲೋಕ ಕಾವ್ಯ ದ್ವಿತೀಯ ಸ್ಥಾನ ಹಾಗೂ ಬೆಳಗಾವಿಯ ಚಂದೂರಿನ ವಿನಾಯಕ ನಂದಿ ಅವರ ಹಳ್ಳಿ ಮತ್ತು ನಗರ ಕಾವ್ಯಗಳು ತೃತೀಯ ಸ್ಥಾನ ಪಡೆದವು.
ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ಕಾಸರಗೋಡಿನ ಪಿಲಿಕುಂಡದ ದೇವಿಕಾ ಪಿ. ಅವರ ಆಸರೆ ಕಥೆ ಪ್ರಥಮ, ಅಥಣಿ ಚಿಕ್ಕೋಡಿಯ ಆಶಾ ಮಾಚಕನೂರರ ಅಂತಃಕರಣ ದ್ವಿತೀಯ ಹಾಗೂ ತುಮಕೂರಿನ ಚಂದನ್ ಡಿ.ಎನ್. ಅವರ ತಿರುವು ಕಥೆ ತೃತೀಯ ಸ್ಥಾನ ಪಡೆದವು.
ದತ್ತಿ ದಾನಿ ಶಿವಾನಂದ ಕಣವಿ, ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಬಸವಪ್ರಭು ಹೊಸಕೇರಿ, ಗುರು ಹಿರೇಮಠ, ಪ್ರೊ. ಎಸ್. ಎಂ. ಶಿವಪ್ರಸಾದ ಕಣವಿ, ಯು.ಎಸ್. ಕುನ್ನಿಭಾವಿ, ಮಹಾಂತೇಶ ನರೇಗಲ್, ಶ್ರೀಶೈಲಗೌಡ ಕಮತರ ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ವಂದಿಸಿದರು.