ಜಾತೀಯತೆ ತೊಲಗಿಸಲು ಶ್ರಮಿಸಿದ ಕನಕದಾಸರು

The Kanakas who worked hard to eliminate casteism
Published on

ಬ್ಯಾಡಗಿ: ಕನಕದಾಸರು ಸಮಾಜದಲ್ಲಿ ಬೇರೂರಿದ್ದ ಜಾತೀಯತೆ ತೊಲಗಿಸಲು ಶ್ರಮಿಸಿದ್ದಲ್ಲದೆ, ಜಾತಿ ರಹಿತ ಸಮಾಜ ನಿರ್ವಿುಸಲು ಸಾಹಿತ್ಯ ಮೂಲಕ ಯತ್ನಿಸಿದ್ದರು ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಹಾಗೂ ಜಾತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರ ಸಿದ್ಧಾಂತ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ಅವರು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು. ನಾವೆಲ್ಲ ಒಂದೇ ಎನ್ನುವ ಭಾವನೆ ಬೆಳೆಸಿಕೊಂಡು ಒಂದಾಗಿ ಜೀವಿಸಬೇಕಿದೆ ಎಂದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಕಾಗಿನೆಲೆ ಕನಕಗುರುಪೀಠ ಹಾಗೂ ಅಭಿವೃದ್ಧಿ ಪ್ರಾಧಿಕಾರದಿಂದ ಕನಕದಾಸರ ಸಾಹಿತ್ಯ ಹಾಗೂ ಜೀವನ ಚರಿತ್ರೆಗಳು ಪ್ರಕಟವಾಗಿವೆ. ಸಾಹಿತ್ಯವನ್ನು ಎಲ್ಲರೂ ಅಧ್ಯಯನ ಮಾಡಿದಾಗ ದಾಸರ ನೈಜ ಹೋರಾಟ ಅರಿವಿಗೆ ಬರಲಿದೆ. ಶರಣರನ್ನು ಹಾಗೂ ದಾಸರನ್ನು ಯಾವುದೊಂದು ಸಮಾಜಕ್ಕೆ ಸೀಮಿತ ಮಾಡಬಾರದು. ಸೀಮಿತಗೊಳಿಸಿದಲ್ಲಿ ಮಹಾತ್ಮರ ನೈಜತೆ ಮರೆಯಾಗಲಿದೆ ಎಂದರು.

ಪ್ರತಿವರ್ಷವೂ ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಸಮಾಜ ಬಾಂಧವರು ಶ್ರೀ ಕನಕದಾಸರ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮದ ಉಸ್ತುವಾರಿ ವಹಿಸುತ್ತಿದ್ದು, ಸಮಾಜ ಸಂಘಟನೆ ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಜಯಂತ್ಯುತ್ಸವ ಕಾರ್ಯಕ್ರಮವನ್ನು ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕಿನ ಸಮಾಜದವರ ಸಹಯೋಗದಲ್ಲಿ ಜರುಗಿತು.

ಹೊಸದುರ್ಗದ ಪುರುಷೋತ್ತಮಾನಂದಪುರಿ ಶ್ರೀಗಳು, ರೇವಣಸಿದ್ಧೇಶ್ವರ ಶ್ರೀಗಳು, ಕಾಗಿನೆಲೆ ಗುರುಪೀಠದ ಆಡಳಿತಾಧಿಕಾರಿ ಎಸ್.ಎಫ್.ಎನ್. ಗಾಜಿಗೌಡರ, ಉದ್ಯಮಿ ನಾಗರಾಜ ಆನ್ವೇರಿ, ರಾಜೇಂದ್ರ ಹಾವೇರಣ್ಣವರ, ಮಾರುತಿ ಹರಿಹರ, ಎಸ್.ಡಿ. ಕರಿಯಣ್ಣನವರ, ಬೀರಪ್ಪ ಬಣಕಾರ, ನಿಂಗಪ್ಪ ಆಡಿನವರ, ಆರ್.ಎಂ. ಆನ್ವೇರಿ, ಪ್ರಾಚಾರ್ಯ ಎಂ. ಬೀರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net