ಕಾಳಿಂಗ ನಾವಡರು ಇಂದಿಗೂ ಅಮರ

kota (5)
Published on

ಕೋಟ: ದಾನಿಗಳ ಸಹಕಾರ, ಪ್ರೇಕ್ಷಕ ಅಭಿಮಾನಿಗಳಿಂದ ಯಕ್ಷಗಾನ ಕಲೆ ಬೆಳೆಯಬೇಕು. ಯಕ್ಷಗಾನ ಕಲಾ ಕೇಂದ್ರ ಅನೇಕ ಕಲಾವಿದರನ್ನು ಯಕ್ಷಗಾನಕ್ಕೆ ಕೊಡುಗೆಯಾಗಿ ನೀಡಿದೆ. ಕಾಳಿಂಗ ನಾವಡರು ನಮ್ಮನ್ನು ಅಗಲಿ 30 ವರ್ಷ ಸಂದರೂ ಇಂದಿಗೂ ಅಮರರಾಗಿದ್ದಾರೆ ಎಂದು ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಹೇಳಿದರು. ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರ ವತಿಯಿಂದ ನಡೆಯುತ್ತಿರುವ ನಾಲ್ಕನೇ ವರ್ಷದ ಯಕ್ಷಗಾನ ಸಪ್ತೋತ್ಸವದಲ್ಲಿ ಕಾಳಿಂಗ ನಾವಡ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಕ್ಷಗಾನ ಕ್ಷೇತ್ರದ ಸಾಧಕ ಬಿದ್ಕಲ್‌ಕಟ್ಟೆ ಕೃಷ್ಣಯ್ಯ ಆಚಾರ್ ಅವರಿಗೆ ‘ನಮ್ಮ ಕಾಳಿಂಗ ನಾವಡ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ ಸಂಸ್ಮರಣಾ ಭಾಷಣ ಮಾಡಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ ಅಭಿನಂದನಾ ನುಡಿಗಳನ್ನಾಡಿದರು. ನಮ್ಮ ಕಾಳಿಂಗ ನಾವಡ ಪ್ರಶಸ್ತಿ ಸಮಿತಿ ಅಧ್ಯಕ್ಷ ಕಾರ್ಕಡ ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಾಸ್ತಾನ ಸಿಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಅಡಿಗ, ಭಾಗವತ ದಿ.ಕಾಳಿಂಗ ನಾವಡ ಸಹೋದರ ಗಣಪಯ್ಯ ನಾವಡ ಉಪಸ್ಥಿತರಿದ್ದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಕಲಾಕೇಂದ್ರದ ವೈಕುಂಠ ಹೆಬ್ಬಾರ್ ನಿರೂಪಿಸಿ, ವಂದಿಸಿದರು. ಸಪ್ತೋತ್ಸವ ಅಂಗವಾಗಿ ಕೋಟದ ಪಂಚವರ್ಣ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net