

ಬೀಳಗಿ: ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರು ಆಗಲು ಬಯಸುವ ವಿದ್ಯಾರ್ಥಿಗಳು ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಅಗತ್ಯ ಜ್ಞಾನ ಮತ್ತು ಕೌಶಲ ಹೊಂದುವ ಮೂಲ ಶಿಕ್ಷಣವೇ ವೈದ್ಯಕೀಯ ಶಿಕ್ಷಣ ಎಂದು ಬಾಡಗಂಡಿಯ ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.
ಬಾಡಗಂಡಿ ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ನಡೆದ ಎಂಬಿಬಿಎಸ್ ಪ್ರಥಮ ವರ್ಷದ ಬ್ಯಾಚಿನ ವೈಟ್ ಕೋಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯ, ಸಹಕಾರಿ, ಔದ್ಯೋಗಿಕ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ನಾನು ಸೇವೆ ಸಲ್ಲಿಸಿದ್ದೇನೆ. ಆದರೆ, ವೈದ್ಯಕೀಯ ಕ್ಷೇತ್ರ ನೀಡಿದಷ್ಟು ಖುಷಿ ಬೇರಾವುದೇ ಕ್ಷೇತ್ರ ನೀಡಿಲ್ಲ. ಎಲ್ಲ ವೃತ್ತಿಯಲ್ಲಿನ ಆನಂದಕ್ಕಿಂತ ಹೆಚ್ಚು ವೈದ್ಯಕೀಯ ಸೇವೆಯಲ್ಲಿ ನನಗೆ ತೃಪ್ತಿ ತಂದಿದೆ ಎಂದರು.
ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಪ್ರಯೋಗಾಲಯಗಳು, ಗ್ರಂಥಾಲಯ, ಬೋಧನಾ ಕೊಠಡಿ ಹಾಗೂ ಕಲಿಕೆಗೆ ಬೇಕಾಗುವ ಎಲ್ಲ ಮೂಲಸೌಲಭ್ಯಗಳನ್ನು ಆಸ್ಪತ್ರೆಯಲ್ಲಿ ಕಲ್ಪಿಸಲಾಗಿದೆ. ವೈದ್ಯ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಬಳಿಸಿಕೊಂಡು ಬಾಡಗಂಡಿಯಲ್ಲಿ ವೈದ್ಯಕೀಯ ಲೋಕವನ್ನೇ ನಿರ್ಮಿಸಬೇಕಿದೆ ಎಂದರು.
ವೈಟ್ ಕೋಟ್ ಸಮಾರಂಭ ಕೆಲ ವೈದ್ಯಕೀಯ ಕಾಲೇಜು ಮತ್ತು ಇತರ ಆರೋಗ್ಯ ಸಂಬಂಧಿತ ಕ್ಷೇತ್ರಗಳಲ್ಲಿ ಆಚರಿಸುವ ಒಂದು ಪದ್ಧತಿಯಾಗಿದೆ. ಇದು ವಿದ್ಯಾರ್ಥಿಯ ಪೂರ್ವಭಾವಿ ಅಧ್ಯಯನದಿಂದ ಕ್ಲಿನಿಕಲ್ ಆರೋಗ್ಯ ವಿಜ್ಞಾನಕ್ಕೆ ಪರಿವರ್ತನೆ ಸೂಚಿಸುತ್ತದೆ. ಈ ಸಂಸ್ಥೆಯಲ್ಲಿ ಕಲಿತ ವೈದ್ಯಕೀಯ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ವೈದ್ಯರಾಗಿ ಗುರುತಿಸಿಕೊಳ್ಳುವ ಮೂಲಕ ಜನ್ಮ ನೀಡಿದ ತಂದೆ, ತಾಯಿ ಹಾಗೂ ಸಂಸ್ಥೆಗೆ ಕೀರ್ತಿ ತರಬೇಕು ಎಂದರು.
ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಜಯಶ್ರೀ ಎಮ್ಮಿ ಮಾತನಾಡಿ, ವಿದ್ಯೆಯ ಜತೆಗೆ ವಿವೇಕ ಮುಖ್ಯ. ಕೇವಲ ವೈದ್ಯರಾದರೆ ಸಾಲದು. ಗುಣಮಟ್ಟದ ಸೇವೆ ಸಲ್ಲಿಸುವ ವೈದ್ಯರಾಗಬೇಕು. ಎಸ್.ಆರ್. ಪಾಟೀಲರು ಯಾವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾರೋ ಅಲ್ಲಿ ಶಿಸ್ತು, ಸಮಯ ಪರಿಪಾಲನೆ, ಸಮರ್ಪಣಾ ಮನೋಭಾವ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದು ವಿಶೇಷ ಎಂದರು.
ವೈದ್ಯಕೀಯ ಕಾಲೇಜಿನ ಮುಖ್ಯಾಧಿಕಾರಿ ಡಾ. ಧರ್ಮರಾಯ ಇಂಗಳೆ, ವೈದ್ಯಕೀಯ ವ್ಯವಸ್ಥಾಪಕ ಡಾ. ವಿಜಯಾನಂದ ಹಳ್ಳಿ, ಆಡಳಿತ ಅಧಿಕಾರಿ ಡಾ. ರಾಘವೇಂದ್ರ ಪಾಟೀಲ, ಬಾಪೂಜಿ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಎಂ. ಎನ್. ಪಾಟೀಲ, ಬಾಪೂಜಿ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯರಾದ ಅನುಷಾ ಪಾಟೀಲ, ಎಸ್.ಎಸ್. ರಂಗನಗೌಡ್ರ, ಮಂಜುನಾಥ ಅರಳಿಕಟ್ಟಿ, ಪ್ರವೀಣ ಕಂಠಿ ಹಾಗೂ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.