ದುಶ್ಚಟ ಕಲಿತವರ ಪಯಣ ಚಟ್ಟದತ್ತ

K HALLI SANKALPA 13
Published on

ಕೊಂಡ್ಲಹಳ್ಳಿ: ಕೆಟ್ಟ ಸ್ನೇಹಿತರ ಸಹವಾಸ, ಅಭ್ಯಾಸದ ಮೂಲಕ ಆರಂಭವಾಗುವ ದುಶ್ಚಟಗಳು ನಮ್ಮನ್ನು ಚಟ್ಟದತ್ತ (ಸಾವು) ಕರೆದೊಯ್ಯುತ್ತವೆ ಎಂದು ವಕೀಲ ಎಂ.ಎನ್.ವಿಜಯಲಕ್ಷ್ಮೀ ಎಚ್ಚರಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿ ಅವಧಿ ಚಿನ್ನದ ಜೀವನ. ಈ ಸಂದರ್ಭ ಓದು, ಅಧ್ಯಯನ, ಆಟ ಹಾಗೂ ಮನೆಯಲ್ಲಿ ಪಾಲಕರಿಗೆ ಸಹಾಯ ಆಗುವ ರೀತಿ ಸಣ್ಣಪುಟ್ಟ ಕೆಲಸದತ್ತ ಗಮನವನ್ನು ಕೇಂದ್ರಿಕರಿಸಬೇಕು ಎಂದು ಹೇಳಿದರು.

ಕೆಲವೊಮ್ಮೆ ಕೆಟ್ಟ ಸ್ನೇಹಿತರ ಸಹವಾಸದಿಂದ ದುಶ್ಚಟಗಳು ಆರಂಭವಾಗಿ ಬದುಕನ್ನೇ ನಾಶಗೊಳಿಸುವ ಸಂದರ್ಭ ಹೆಚ್ಚು. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಒಳ್ಳೆ ಹವ್ಯಾಸ ಬೆಳೆಸಿಕೊಳ್ಳಬೇಕು. ಈ ಮೂಲಕ ಉನ್ನತ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಚಲನಚಿತ್ರ ನಟ, ನಟಿಯರನ್ನು ಅನುಕರಣೆ ಮಾಡಲು ಹೋಗದಿರಿ. ಅವರ ನಿಜ ಜೀವನ ಚಲನಚಿತ್ರದ ರೀತಿ ಇರುವುದಿಲ್ಲ. ಎಲ್ಲ ಸಾಮಾನ್ಯರಂತೆ ಇರತ್ತದೆ. ಸಿನಿಮಾ ಮನರಂಜನೆಗಾಗಿ ಅಷ್ಟೇ. ಅದೇ ಬದುಕು ಆಗುವುದಿಲ್ಲ ಎಂದು ಹೇಳಿದರು.

ಧರ್ಮಸ್ಥಳ ಸಂಸ್ಥೆಯ ವಲಯ ಮೇಲ್ವಿಚಾರಕ ಸಂತೋಷ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು, ಯುವಜನರು ದುಶ್ಚಟಗಳಿಗೆ ಆಕರ್ಷಣೆ ಆಗಿ ಚಿಕ್ಕ ವಯಸ್ಸಿನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವುದು ನೋವಿನ ಸಂಗತಿ ಎಂದರು.

ಮಕ್ಕಳು ಚೆನ್ನಾಗಿ ಓದಿ ಉನ್ನತ ಬದುಕು ಕಟ್ಟಿಕೊಳ್ಳಲಿ ಎಂದು ಪಾಲಕರು ಸಂಕಷ್ಟದ ಮಧ್ಯೆಯೂ ಶಾಲಾ-ಕಾಲೇಜಿಗೆ ಕಳುಹಿಸುತ್ತಾರೆ. ಅವರ ಆಶಯ ಹಾಗೂ ಶಿಕ್ಷಕರು ಶ್ರಮ ಅರಿತರೆ ಜೀವನ ಉತ್ತಮವಾಗಿರಲಿದೆ ಎಂದು ಹೇಳಿದರು.

ಪ್ರಾಚಾರ್ಯ ಎ.ನಾರಾಯಣರೆಡ್ಡಿ ಮಾತನಾಡಿ, ಮಾನಸಿಕ ಸ್ವಾಸ್ಥ್ಯದಿಂದ ಮಾತ್ರ ಎಲ್ಲ ಸಾಧನೆಗಳನ್ನು ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಸಹಕಾರಿ ಆಗಿವೆ ಎಂದರು.

ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಿ.ಷಡಕ್ಷರಪ್ಪ ಉದ್ಘಾಟಿಸಿದರು. ಉಪನ್ಯಾಸಕರಾದ ಎಸ್.ಕೆ.ವೀಣಾ, ಬಿ.ಎಚ್.ಶಾರದಾ, ಎಸ್.ಟಿ.ನಟರಾಜ್, ಸಣ್ಣಪಾಲಯ್ಯ, ಪಿ.ಎ.ವಿನೋದ್ ರಾವ್, ಎಂ.ನಾಗರಾಜ್, ಧನಂಜಯ್, ಈಶ್ವರಪ್ಪ,ನಂದಿನಿ, ಯಶೋದಾ, ವಲಯ ಮೇಲ್ವಿಚಾರಕ ಸಂತೋಷ್‌ಕುಮಾರ್, ಸೇವಾ ಪ್ರತಿನಿಧಿ ಪಾರ್ವತಮ್ಮ ನಾಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net