

ವಿಜಯವಾಣಿ ಸುದ್ದಿಜಾಲ ಧಾರವಾಡ
ಯುವ ಜನತೆ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳುವುದರಿಂದ ಸೃಜನಶೀಲತೆ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ ಎಂದು ಧಾರವಾಡ ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಬಸು ಬೇವಿನಗಿಡದ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೇದಾ ಸಿದ್ದಾರ್ಥ ಪಟಗುಂದಿ ಅವರು ಬರೆದ `ದಿ ಜರ್ನಿ ಆಫ್ ಮೈ ಸ್ಕೂಲ್ ಲೈಫ್' ಪುಸ್ತಕ ಬಿಡುಗಡೆಗೊಳಿಸಿ ಅವರುಮಾತನಾಡಿದರು.
ಪುಸ್ತಕ ಓದುವ, ಬರೆಯುವ ಪ್ರಮಾಣ ಕ್ಷೀಣಿಸುತ್ತಿದೆ. ವೇದಾ ಬರೆದಿರುವ ಪುಸ್ತಕವು ಅವಳ ಓದುವ ಬರೆಯುವ ಪ್ರತಿಭೆಯನ್ನು ಬಿಂಬಿಸುತ್ತದೆ ಎಂದರು.
ಸಾಹಿತಿ ಡಾ. ಮಲ್ಲಿಕಾರ್ಜುನ ಗುಮ್ಮಗೋಳ ಮಾತನಾಡಿ, ಸಮಾಜದಲ್ಲಿ ಅಧಿಕಾರಕ್ಕಿಂತ ಜ್ಞಾನಕ್ಕೆ ಹೆಚ್ಚಿನ ಮಹತ್ವ ಇದೆ ಎಂದರು.
ಕೆಎಎಸ್ ಅಧಿಕಾರಿ ಡಾ. ವಿಜಯಕುಮಾರ ತೊರಗಲ್ಲ ಮಾತನಾಡಿ, ವೇದಾಳ ಪುಸ್ತಕವು ಸಣ್ಣ ಕಥೆಯ ರೂಪದಲ್ಲಿ ಬಂದರೂ ಅದು ಆಕೆಯ 10 ವರ್ಷದ ಶಾಲಾ ಜೀವನದ ಅನುಭವಗಳನ್ನು ತೋರಿಸುತ್ತದೆ ಎಂದರು.
ನಿವೃತ್ತ ಡಿಡಿಪಿಐ ಗಜಾನನ ಮಣ್ಣಿಕೇರಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಕವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಎಸ್. ಪಟಗುಂದಿ, ಪ್ರೊ. ಸವಿತಾ ಪಟಗುಂದಿ, ಶಂಕರ ಕುಂಬಿ, ಕೃತಿಕಾರ್ತಿ ವೇದಾ ಪಟಗುಂದಿ, ಇತರರಿದ್ದರು.