

ಹುಬ್ಬಳ್ಳಿ: ಸೈಬರ್ ಅಪರಾಧಗಳು ಜಾಸ್ತಿಯಾಗುತ್ತಿದ್ದಂತೆ ತಮ್ಮ ಬ್ಯಾಂಕ್ ಖಾತೆಗಳನ್ನೇ ನಂಬದ ಜನರು, ಈಗ ಬ್ಯಾಂಕ್ ಲಾಕರ್ ಕೂಡ ನಂಬಲಾರದ ಸ್ಥಿತಿ ಉಂಟಾಗಿದೆ. ಲಾಕರ್ನಲ್ಲಿಟ್ಟ ಆಭರಣಗಳೇ ಮಂಗಮಾಯವಾಗಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ನಿದ್ದೆಗೆಡಿಸುವಂತೆ ಮಾಡಿದೆ.
ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಎಚ್. ಪಾಟೀಲ ರಸ್ತೆಯ ಎಸ್ಬಿಐ ಬ್ಯಾಂಕ್ನಲ್ಲಿ ಉದ್ಯಮಿಯೊಬ್ಬರಿಗೆ ಸೇರಿದ ಲಾಕರ್ನಲ್ಲಿದ್ದ 56.30 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನವಾಗಿದೆ. ಮಹಾವೀರ ಕಾಲನಿಯ ಉದ್ಯಮಿ ಈಶ ಬೋಮೇಶ್ವರದಾಸ ಕೊಹ್ಲಿ ಎಂಬುವವರ ಹೆಸರಿನ ಲಾಕರ್ನಲ್ಲಿದ್ದ ಮಾಂಗಲ್ಯ ಸರ, ಎರಡು ಬಂಗಾರದ ಚೈನ್, ಪಂಜಾಬಿ ಕಳ, ಲಕ್ಷ್ಮೀ ಲಾಕೆಟ್, ಸಿಲ್ವರ್ ಕಾಯಿನ್ಸ್, ಕಿವಿಯೋಲೆ, ಡೈಮಂಡ್ ನೆಕ್ಲೇಸ್, ಡೈಮಂಡ್ ರಿಂಗ್, ಡೈಮಂಡ್ ಬಳೆ ಸೇರಿ 56.30 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನವಾಗಿವೆ. ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ಲಾಕರ್ ಬಳಿ ಹೋದಾಗ ಓಪನ್ ಆಗಿರುವುದು ನೋಡಿ ಉದ್ಯಮಿ ಈಶ ಅವರಿಗೆ ಶಾಕ್ ಆಗಿದೆ. ಲಾಕರ್ನಲ್ಲಿದ್ದ ಆಭರಣ ಇಲ್ಲ. ಇದಕ್ಕೆ ಬ್ಯಾಂಕ್ ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿ ಈಶ ಅವರು ಎಸ್ಬಿಐನ ನಾಲ್ವರು ಅಧಿಕಾರಿಗಳಾದ ದಿಲೀಪ್ ಕೆಂಭಾವಿ, ಸಂತೋಷ, ಮೋಹನ ಪಾಟೀಲ, ರವಿ ಶಂಕರ ಎಂಬುವರ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ವಿವರ: ಕೇಶ್ವಾಪುರದ ಉದ್ಯಮಿ ಈಶ ಬೋಮೇಶ್ವರ ಕೋಹ್ಲಿ ಅವರ ತಂದೆ ಬೋನೇಶ್ವರ ಅವರು 1972ರಿಂದ ಬ್ಯಾಂಕ್ ಲಾಕರ್ ಬಳಸಿದ್ದಾರೆ. 2013ರಲ್ಲಿ ಬೋನೇಶ್ವರ ಅವರು ಪತ್ನಿ ಹಾಗೂ ಪುತ್ರ ಈಶ ಅವರೊಂದಿಗೆ ತೆರಳಿ ಎಸ್ಬಿಐ ಲಾಕರ್ನಲ್ಲಿದ್ದ ಆಭರಣಗಳನ್ನು ತೋರಿಸಿದ್ದಾರೆ. 2014ರಲ್ಲಿ ಬೋಮೇಶ್ವರ ಅವರು ಮೃತಪಟ್ಟಿದ್ದಾರೆ. ಇದಾದ ಬಳಿಕ ಈಶ ಹಾಗೂ ಅವರ ತಾಯಿ ತೆರಳಿ 2014ರಲ್ಲಿ ಲಾಕರ್ ತಪಾಸಣೆ ಮಾಡಿಕೊಂಡು ಬಂದಿದ್ದಾರೆ. ಆದರೆ, 2023ರವರೆಗೆ ಬ್ಯಾಂಕ್ನತ್ತ ಹೋಗಿಲ್ಲ. ಕಳೆದ ಡಿಸೆಂಬರ್ 1ರಂದು ಬ್ಯಾಂಕ್ಗೆ ಹೋಗಿ ಲಾಕರ್ ನೋಡಿದಾಗ ಆಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈಶ ಅವರದು ಎರಡು ಲಾಕರ್ ಇದ್ದು, ಅದರಲ್ಲಿ ಒಂದು ಲಾಕರ್(1/5) ಓಪನ್ ಆಗಿ ಅದರಲ್ಲಿದ್ದ 56.30 ಲಕ್ಷ ರೂ. (ಈಗಿನ ಮೌಲ್ಯ 1.5 ಕೋಟಿ ರೂ.) ಮೌಲ್ಯದ ಆಭರಣ ಕಳ್ಳತನವಾಗಿದೆ. ಇನ್ನೊಂದು ಲಾಕರ್ ಓಪನ್ (1/12) ಮಾಡಿಲ್ಲ.
ನಾವಿಟ್ಟ ಆಭರಣಗಳೇ ಇಲ್ಲ ಎನ್ನುವುದು ಅತ್ಯಂತ ನೋವಿನ ಸಂಗತಿ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಎಸ್ಬಿಐ ಓಂಬಡ್ಸ್ಮನ್, ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ದೂರು ದಾಖಲಿಸಿದ್ದೇನೆ. ಕೇಂದ್ರ ವಿತ್ತ ಸಚಿವರಿಗೂ ಈ ಕುರಿತು ಮನವಿ ಕೊಡುತ್ತೇನೆ.
-ಈಶ ಕೊಹ್ಲಿ, ಆಭರಣ ಕಳೆದುಕೊಂಡವರು