

ಹುಕ್ಕೇರಿ: ಜಾರಕಿಹೊಳಿ ಸಹೋದರರು ಯಾವತ್ತೂ ಜಾತಿ ರಾಜಕೀಯ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಜನರ ಆಶೀರ್ವಾದದಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಆಯ್ಕೆಯಾಗಿದ್ದೇವೆ. ಜಾತಿ ರಾಜಕಾರಣ ಮಾಡುತ್ತೇವೆಂಬ ವಿರೋಧಿಗಳ ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಣ್ಣ ಸಮುದಾಯವಾಗಿರುವ ನಮ್ಮ ಜಾರಕಿಹೊಳಿ ಕುಟುಂಬಕ್ಕೆ ಜಾತಿ ಪದವೇ ಗೊತ್ತಿಲ್ಲ. ನಮಗೆ ಎಲ್ಲ ಜಾತಿ, ವರ್ಗದ ಜನರ ಆಶೀರ್ವಾದ ಬೇಕು. ನಾವು ಅವರ ಸೇವೆಗೆ ಸದಾ ಬದ್ಧ ಎಂದರು.
ನಮ್ಮ ಸಮುದಾಯದ ಸಂಖ್ಯೆ ಕ್ಷೇತ್ರದಲ್ಲಿ ಕೇವಲ ೩ ರಿಂದ ೫ ಸಾವಿರವಿದೆ. ಲಿಂಗಾಯತರು, ಕುರುಬರು, ಉಪ್ಪಾರರು, ಮುಸ್ಲಿಮರು, ಪ.ಜಾತಿ, ಸೇರಿ ಜನರ ಆಶೀರ್ವಾದದಿಂದ ಕುಟುಂಬದಲ್ಲಿ ಮೂವರು ಶಾಸಕರು, ಎಂಎಲ್‌ಸಿ ಮತ್ತು ಸಂಸದರಿದ್ದಾರೆ. ನಾವೂ ನಮ್ಮ ಕ್ಷೇತ್ರಗಳಲ್ಲಿ ಎಲ್ಲ ಸಮುದಾಯಗಳ ಮುಖಂಡರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಥಾನ-ಮಾನ ನೀಡಿದ್ದೇವೆ ಎಂದರು. ಹತ್ತು ವರ್ಷಗಳಿಂದ ಬಿಡಿಸಿಸಿ ಬ್ಯಾಂಕಿನ ಚುಕ್ಕಾಣಿ ಹಿಡಿಯಲು ಜಾರಕಿಹೊಳಿ ಸಹೋದರರು ಬೇಕಾದರು. ಆದರೆ, ಇದೀಗ ನಾವು ಬೇಡವಾಗಿರುವ ಕಾರಣಕ್ಕೆ ಜಾತಿ ಮುಂದೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಆರು ತಿಂಗಳಿನಿಂದ ಹುಕ್ಕೇರಿ ತಾಲೂಕಿನ ಸಹಕಾರ ಚಿತ್ರಣವೇ ಬದಲಾಗಿದ್ದು, ನಿರ್ಭಯವಾಗಿ ಮತ ಚಲಾಯಿಸಬೇಕು. ಸಹಕಾರ ಸಂಘಗಳು ಉಳಿಯಲು ಜಿಲ್ಲೆಯ ಎಲ್ಲ ನಾಯಕರು ಒಂದಾಗುತ್ತಿದ್ದೇವೆ. ನಮ್ಮನ್ನು ಬೆಂಬಲಿಸಿದರೆ ೨೪ ತಾಸಿನಲ್ಲಿ ನಿರಂತರ ಜ್ಯೋತಿ, ಟ್ರಾನ್ಸ್ ಫಾರ್ಮರ್ ತ್ವರಿತವಾಗಿ ಸಿಗಲಿವೆ ಎಂದರು.
ಮಾಜಿ ಸಚಿವ ಶಶಿಕಾಂತ ನಾಯಿಕ, ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಸಂಕೇಶ್ವರ ಹೀರಾ ಶುಗರ್ಸ್ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಅಶೋಕ ಪಟ್ಟಣಶೆಟ್ಟಿ, ರವಿ ಹಿಡ್ಕಲ್, ಸುರೇಶ ದೊಡ್ಡಲಿಂಗನವರ, ಬಸನಗೌಡ ಮೆಗನ್ನವರ, ಶಾನೂಲ್ ತಹಸೀಲ್ದಾರ್, ಅರುಣ ಹುದ್ದಾರ ಇತರರಿದ್ದರು.