

ಬೆಂಗಳೂರು: ಪ್ರಾಪಂಚಿಕವಾಗಿ ಪ್ರತಿಯೊಬ್ಬ ಮನುಷ್ಯ ತಂದೆ-ತಾಯಿಯ ಗರ್ಭದಿಂದ ಜನಿಸಿದರೂ, ಪಾರಮಾರ್ಥಿಕವಾಗಿ ಪ್ರತಿಯೊಬ್ಬ ಜೀವಿಯೂ ಶಿವನ ಅಂಶವಾಗಿದ್ದಾನೆ ಎಂಬುದನ್ನು ವೀರಶೈವ ಸಿದ್ಧಾಂತ ಪ್ರತಿಪಾದಿಸಿದೆ ಎಂದು ಉಜ್ಜಯಿನಿ ಜಗದ್ಗುರು ಶ್ರೀಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ಬಸವನಗುಡಿ ನಿಜಗುಣ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನ ಹಿನ್ನೆಲೆಯನ್ನು ಒಂದೊಂದು ಸಿದ್ಧಾಂತಗಳು ಒಂದೊಂದು ರೀತಿಯಲ್ಲಿ ಪ್ರತಿಪಾದಿಸಿವೆ. ಆದರೆ ಜಗದ್ಗುರು ಪಂಚಾಚಾರ್ಯರು ಪ್ರತಿಪಾದಿಸಿರುವ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತವು ಹುಟ್ಟಿದ ಪ್ರತಿಯೊಬ್ಬ ಜೀವಿಯು ಶಿವನ ಅಂಶ ಎಂದು ಸಾರಿದೆ. ಮಹಾದೇವನಿಂದ ಬಂದಿರುವ ಈ ಮಾನವ ಜನ್ಮದ ಸಾರ್ಥಕತೆಗೆ, ಶ್ರೀಗುರುವಿನಿಂದ ಲಿಂಗದೀಕ್ಷೆಯನ್ನು ಪಡೆದು ಲಿಂಗಾಂಗ ಸಾಮರಸ್ಯದ ಮೂಲಕ ಮರಳಿ ಶಿವನಲ್ಲಿಯೇ ಒಂದಾಗುವ ಅದ್ಭುತ ಮಾರ್ಗವನ್ನು ತೋರಿಸಿದ್ದಾರೆ. ಗಂಡು-ಹೆಣ್ಣು, ಜಾತಿ-ಮತ ಎಂಬ ಭೇದ ಭಾವವಿಲ್ಲದೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಧಾರ್ಮಿಕ ಸಾಧನೆಯಿಂದ ಶ್ರೇಷ್ಠತೆಯನ್ನು ಸಂಪಾದಿಸುವ ವಿಶಾಲ ತತ್ವ ವೀರಶೈವ ಸಿದ್ಧಾಂತದಲ್ಲಿದೆ.
ಆಷಾಡ ಮಾಸವನ್ನು ಶಾಸ್ತ್ರಗಳಲ್ಲಿ ಅಶುಭ ಎಂದು ಕರೆದಿದ್ದಾರೆ. ಆದರೆ ಅಶುಭ ಮಾಸವನ್ನು ಶುಭ ಮಾಸವನ್ನಾಗಿ ಪರಿವರ್ತಿಸಿದ ಕೀರ್ತಿ ಶ್ರೀರಂಭಾಪುರಿ ಲಿಂಗೈಕ್ಯ ವೀರಗಂಗಾಧರ ಜಗದ್ಗುರುಗಳಿಗೆ ಸಲ್ಲುತ್ತದೆ. ಏಕಾಂತವಾಗಿ ಮಾಡುವ ಮಹಾಶಿವಪೂಜೆಯನ್ನು ಲೋಕಾಂತಗೊಳಿಸಿದ ಪರಂಪರೆಯನ್ನು ಪ್ರಸ್ತುತ ಜಗದ್ಗುರು ಪಂಚಾಚಾರ್ಯರು ಮುಂದುವರೆಸುತ್ತಿದ್ದು, ಬೆಂಗಳೂರು ಮಹಾನಗರದಲ್ಲಿ ಆಷಾಡ ಮಾಸ ಪೂರ್ತಿ ವಿಶೇಷ ಕಾರ್ಯಕ್ರಮ ನಡೆದುಕೊಂಡು ಬಂದಿದೆ ಎಂದು ಜಗದ್ಗುರುಗಳು ವಿವರಿಸಿದರು.
ಕಾರ್ಯಕ್ರಮದಲ್ಲಿ ಎಡೆಯೂರು, ಶಿವಗಂಗೆ, ಕಲ್ಲುಬಾಳು ಶ್ರೀಗಳು ಮಾತನಾಡಿದರು. ವಿಜಯವಾಣಿ ಹಿರಿಯ ವರದಿಗಾರ ಪ್ರಶಾಂತ ರಿಪ್ಪನ್‌ಪೇಟೆ ಉಜ್ಜಯಿನಿ ಪೀಠ ಪರಂಪರೆ ಕುರಿತು ಉಪನ್ಯಾಸ ನೀಡಿದರು. ರಾಜಾಪುರ, ನಾಗಲಾಪುರ, ಬೆಳ್ಳಾವಿ, ಪುರಿಗಾಲಿ ಮಠದ ಶ್ರೀಗಳು, ಪೂಜಾ ಸಮಿತಿಯ ಅಧ್ಯಕ್ಷ ಷಡಕ್ಷರಿ ಶಾಸ್ತ್ರಿಗಳು, ಉಪಾಧ್ಯಕ್ಷರಾದ ಶಿವಶಂಕರ ಶಾಸ್ತ್ರಿಗಳು, ಕಾರ್ಯದರ್ಶಿ ಬಿಜ್ಜಳ್ಳಿ ನಂದೀಶ್ ಮತ್ತಿತರರು ಉಪಸ್ಥಿತರಿದ್ದರು.