ರಾಜ್ಯದಲ್ಲಿ ಪತ್ರಿಕೆ ವಿತರಣೆ ಸಮಸ್ಯೆ: ಸಿಎಂ ಯಡಿಯೂರಪ್ಪ ಮಧ್ಯಪ್ರವೇಶಕ್ಕೆ ಕೆ.ಎನ್. ಭಟ್ ಒತ್ತಾಯ

k n bhat 30 mar 20
Published on

ನವದೆಹಲಿ: ರಾಜ್ಯದ ಅನೇಕ ಕಡೆಗಳಲ್ಲಿ ದಿನಪತ್ರಿಕೆಗಳು ಜನರಿಗೆ ತಲುಪುತ್ತಿಲ್ಲ. ಕರೊನಾ ವೈರಸ್ ಬಗ್ಗೆ ಪತ್ರಿಕಾ ವಿತರಕರೂ ಭಯಗೊಂಡಿದ್ದಾರೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತಕ್ಷಣವೇ ಮಧ್ಯಪ್ರವೇಶಿಸಿ ವಿತರಕರಲ್ಲಿ ಧೈರ್ಯ ತುಂಬಿ ಪತ್ರಿಕೆಗಳಿಂದ ಕರೊನಾ ಹಬ್ಬುವುದಿಲ್ಲ ಮತ್ತು ಗ್ರಾಹಕರೂ ಎಚ್ಚರಿಕೆ ಕ್ರಮಗಳಿಂದ ಪತ್ರಿಕೆ ಓದಬಹುದು ಎಂದು ಮನವರಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎನ್. ಭಟ್ ಆಗ್ರಹಿಸಿದ್ದಾರೆ.

ವಾಸ್ತವ ಸುದ್ದಿಗಳಿಗಾಗಿ ಜನರು ಪತ್ರಿಕೆಗಳನ್ನೇ ನಂಬಿದ್ದಾರೆ. ಸಾಮಾಜಿಕ ಜಾಲತಾಣ, ಟಿವಿ ಮಾಧ್ಯಮಗಳಲ್ಲಿ ಬರುತ್ತಿರುವ ಕರೊನಾ ಸುದ್ದಿಗಳಿಂದ ಜನರು ಭಯಭೀತಗೊಂಡಿದ್ದಾರೆ. ಅನೇಕ ಮಂದಿ ಇದರಿಂದಲೇ ಮಾನಸಿಕ ಅಸ್ವಸ್ಥರಾಗಿದ್ದಾರೆ. ಪತ್ರಿಕೆಗಳನ್ನು ಓದಿದ ಮೇಲೆ ನಮಗೆಷ್ಟೋ ಸಮಾಧಾನವಾಗುತ್ತಿದೆ. ಇಂಥಾ ಕಠಿಣ ಸಂದರ್ಭದಲ್ಲಿ ಪತ್ರಿಕೆಗಳ ಸ್ಥಿತಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರೊನಾ ಪೀಡಿತರಾಗದವರೂ ವೈರಸ್ ಬಗ್ಗೆ ಆತಂಕದಲ್ಲಿದ್ದಾರೆ. ಅವರಲ್ಲಿ ಧೈರ್ಯ ತುಂಬುವ ಕೆಲಸವಾಗಬೇಕು. ಪಾಸಿಟಿವ್ ಸುದ್ದಿಗಳು ಜನರನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ. ಆದರೆ ಸೋಷಿಯಲ್ ಮೀಡಿಯಾ, ಸುದ್ದಿವಾಹಿನಿಗಳಲ್ಲಿ ಬರುವ ಭಯ ಹುಟ್ಟಿಸುವ ಸುದ್ದಿಗಳಿಂದ ವ್ಯಕ್ತಿಯ ಮಾನಸಿಕ ವರ್ತನೆಯಲ್ಲಿ ಬದಲಾವಣೆಯಾಗಿ ಭವಿಷ್ಯದಲ್ಲಿ ಮಾನಸಿಕ ಖಿನ್ನತೆಗೊಳಗಾಗುವ ಸಾಧ್ಯತೆಗಳಿವೆ. ಇದನ್ನೆಲ್ಲ ಅರಿತು ಪತ್ರಿಕಾ ವಿತರಕರೊಂದಿಗೆ ಮುಖ್ಯಮಂತ್ರಿ ಅಥವಾ ಗೃಹ ಸಚಿವರು ನೇರವಾಗಿ ಮಾತುಕತೆ ನಡೆಸಿ ಪತ್ರಿಕಾ ವಿತರಣೆ ಸಮಸ್ಯೆ ಬಗೆಹರಿಸಬೇಕು. ಮತ್ತಷ್ಟು ದಿನ ನಾವು ಲಾಕ್​ಡೌನ್ ಎದುರಿಸುವ ಸಾಧ್ಯತೆ ಇರುವುದರಿಂದ ಪತ್ರಿಕೆ ಪೂರೈಕೆ ಅನಿವಾರ್ಯ ಎಂದು ಕೆ.ಎನ್. ಭಟ್ ಹೇಳಿದ್ದಾರೆ.

ಮಂತ್ರಿಗಳು, ಶಾಸಕರು ಟೂರ್ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಜನಪ್ರತಿನಿಧಿಗಳು ಬರುತ್ತಾರೆಂದರೆ ಅಲ್ಲಿ ನೂರಿನ್ನೂರು ಜನ ಸೇರುತ್ತಾರೆ. ಬ್ರಿಟನ್ ಪ್ರಧಾನಿಗೇ ಕರೊನಾ ಬಂದಿದೆ. ನಮ್ಮ ಜನಪ್ರತಿನಿಧಿಗಳಿಗೆ ಬರಬಾರದು ಎಂದೆನಿಲ್ಲವಲ್ಲ. ಇದನ್ನವರು ತಿಳಿದುಕೊಳ್ಳಬೇಕು. ಕುಳಿತಲ್ಲಿಂದಲೇ ಎಲ್ಲವನ್ನೂ ನಿರ್ವಹಿಸಿ ಕರೊನಾ ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net