

ಹುಬ್ಬಳ್ಳಿ: ಕೋವಿಡ್ ಸಮಯದಲ್ಲಿ ನಡೆದಿರುವ ಹಗರಣಗಳ ತನಿಖೆಯನ್ನು ನಮ್ಮ ಸರ್ಕಾರ ಕಾಟಾಚಾರಕ್ಕಾಗಿ ಮಾಡುತ್ತಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೆಂದೇ ನ್ಯಾಯಾಂಗ ತನಿಖೆ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹಲವಾರು ಹಗರಣಗಳು ನಡೆದಿವೆ. ಅವುಗಳ ಇಂಚಿಂಚೂ ತನಿಖೆ ನಡೆಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲೂ ನಡೆದಿರುವ ಕೆಲ ಹಗರಣಗಳ ತನಿಖೆ ಮಾಡಲು ನಿರ್ಧರಿಸಲಾಗಿದೆ. ಹಗರಣಗಳಲ್ಲಿ ಯಾರೇ ತಪ್ಪಿತಸ್ಥರಿರಲಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ದ್ವೇಷದಿಂದ ನಾವು ಬಿಜೆಪಿ ಸರ್ಕಾರದ ಹಗರಣದ ತನಿಖೆ ಮಾಡುತ್ತಿಲ್ಲ. ಇನ್ನೂ ಆರಂಭವಾಗಿಲ್ಲ ಕೂಡ. ಈಗಾಗಲೇ ಬಿಜೆಪಿಗರು ಇದು ದ್ವೇಷದ ರಾಜಕಾರಣ ಎನ್ನುತ್ತಿದ್ದಾರೆ. ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಲಿದೆ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದ್ದರಿಂದಲೇ ಜನ ನಮಗೆ ಅಧಿಕಾರ ನೀಡಿದ್ದಾರೆ. ಕೋವಿಡ್ ಹಗರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತೇವೆ ಎಂದರು.
ನಾವು ಪಾರದರ್ಶಕ ಆಡಳಿತ ಕೊಡುತ್ತೇವೆ ಎಂದು ಜನರಿಗೆ ವಾಗ್ದಾನ ಮಾಡಿದ್ದೇವೆ. ಅದೇ ಪ್ರಕಾರ ನಡೆದುಕೊಳ್ಳುತ್ತೇವೆ. ಈಗಾಗಲೇ ಮೂರು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇನ್ನೊಂದು ಗ್ಯಾರಂಟಿ ಈ ತಿಂಗಳಲ್ಲಿ ಜಾರಿ ಮಾಡಿ, ಯುವನಿಧಿ ಗ್ಯಾರಂಟಿಯನ್ನು ಡಿಸೆಂಬರ್ನಲ್ಲಿ ಆರಂಭಿಸುತ್ತೇವೆ ಎಂದರು.
ದಾಖಲೆ ಕೊಡಿ: ಕಿಮ್್ಸ ಸಿಬ್ಬಂದಿ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ದಾಖಲೆ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಕಿಮ್್ಸ ವೈದ್ಯರು ಕರ್ತವ್ಯದ ವೇಳೆ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ. ಒಂದು ವೇಳೆ ಇರದಿದ್ದರೆ ಅಂತಹ ವೈದ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.