ಸಂವಿಧಾನ-ಸಾಹಿತ್ಯದ ಮಧ್ಯೆ ಅವಿನಾಭಾವ ಸಂಬಂಧ

The inseparable relationship between the Constitution and literature
Published on

ಶಿಗ್ಗಾಂವಿ: ಜನರಿಂದ, ಜನರಿಗಾಗಿ ಇರುವ ಸಂವಿಧಾನವು ರಾಜಕೀಯ ವಿಜ್ಞಾನದ ಪರಿಭಾಷೆಯಾಗಿದೆ. ಮಾನವೀಯ ಮೌಲ್ಯವು ಅಂತರ್ವಾಹಿನಿಯಾಗಿ ಹರಿದುಬಂದ ಸಾಹಿತ್ಯದಲ್ಲಿ ಸಾಂವಿಧಾನಿಕ ಆಶಯಗಳನ್ನು ಹುಡುಕುವುದು ಅಂತರಶಿಸ್ತೀಯ ಅಧ್ಯಯನಕ್ಕೆ ಪ್ರೇರೇಪಣೆ ಕೊಡುವ ಹೊಸ ಆಯಾಮವೇ ಆಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರ ರಾಮಚಂದ್ರಪ್ಪ ಹೇಳಿದರು.

ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಸೋಮವಾರ ಆರಂಭವಾದ ‘ಕನ್ನಡ ಸಾಹಿತ್ಯ; ಸಾಂವಿಧಾನಿಕ ಆಶಯಗಳು’ 3 ದಿನಗಳ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತನ್ನು ನಾವು ಅರ್ಥೈಸಿಕೊಳ್ಳಬೇಕು. ಮೇಲ್ನೋಟಕ್ಕೆ ಸಂವಿಧಾನವು ನಿಯಮಗಳ ನುಡಿಗಟ್ಟಾದರೂ ಅದರಲ್ಲೂ ಒಂದು ಸಂವೇದನೆ ಇದೆ. ಸಂವಿಧಾನವು ಬದುಕುವ, ಮಾತನಾಡುವ ಅನೇಕ ಹಕ್ಕುಗಳನ್ನು ದಕ್ಕಿಸಿದೆ. ಹೀಗಾಗಿ, ಸಂವಿಧಾನ ಹಾಗೂ ನಮ್ಮ ಬದುಕು ಮತ್ತು ಬದುಕಿನ ಸಂವೇದನೆಯ ಸಾಹಿತ್ಯಕ್ಕೂ ಒಂದು ಅವಿನಾಭಾವ ಸಂಬಂಧವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಇಂದು ಬರೆಯುವ ಯುವ ಲೇಖಕರನ್ನು ಗಮನದಲ್ಲಿಟ್ಟುಕೊಂಡು ಈ ಶಿಬಿರ ಮಾಡಲಾಗಿದೆ. ಎಲ್ಲ ಶಿಬಿರಾರ್ಥಿಗಳು ಮೂರು ದಿನಗಳ ಕಾಲ ಭಾಗಿಯಾಗಿ ಸದುಪಯೋಗ ಪಡೆಯಬೇಕು ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಮಾತನಾಡಿದರು. ಜಾನಪದ ವಿವಿಯ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಮಾನ್ಪಡೆ ಪ್ರಾಸ್ತಾವಿಕ ಮಾತನಾಡಿದರು.

ಜಾನಪದ ವಿವಿ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ, ಕುಲಸಚಿವರಾದ ಪ್ರೊ. ಸಿ.ಟಿ. ಗುರುಪ್ರಸಾದ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಕಮ್ಮಟದ ನಿರ್ದೇಶಕರಾದ ಡಾ.ಎ.ಬಿ. ರಾಮಚಂದ್ರಪ್ಪ, ಡಾ. ಜಿ. ಪ್ರಶಾಂತ ನಾಯಕ, ಸಾಕ್ಷ್ಯತ್ರದ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ, ಜಾನಪದ ವಿವಿಯ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು, ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು ಇದ್ದರು. ಸಹಾಯಕ ಪ್ರಾಧ್ಯಾಪಕ ಚಂದ್ರಪ್ಪ ಸೊಬಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net