ರಂಗ ರೂಪದಿಂದ ಪಠ್ಯದ ಒಳ ತಿರುಳು ಸುಲಭವಾಗಿ ಅರ್ಥ

31sgr2
ಸಾಗರದಲ್ಲಿ ನಾಟಕ ಪ್ರದರ್ಶನಕ್ಕೆ ಕೆ.ಸಿ.ಸತ್ಯನಾರಾಯಣ ಚಾಲನೆ ನೀಡಿದರು. ರವೀಂದ್ರ, ಧರ್ಮಪ್ಪ, ಡಾ. ದೇವೇಂದ್ರಪ್ಪ, ಪ್ರಭಾವತಿ ಇತರರಿದ್ದರು.
Published on

ಸಾಗರ: ರಂಗಭೂಮಿ ಮೂಲಕ ಮಕ್ಕಳ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿದೆ. ಪಠ್ಯದಲ್ಲಿ ಬರುವ ಕೃತಿಗಳನ್ನು ರಂಗದ ಮೇಲೆ ನಾಟಕ ರೂಪದಲ್ಲಿ ತರುವುದರಿಂದ ಮಕ್ಕಳಿಗೆ ಪಠ್ಯದ ಒಳ ತಿರುಳು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಾಚಾರ್ಯ ಕೆ.ಸಿ.ಸತ್ಯನಾರಾಯಣ ಹೇಳಿದರು.

ನಗರಸಭೆ ರಂಗಮಂದಿರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಕೊಪ್ಪಳ ರಂಗಧಾರ ಮತ್ತು ಕಲ್ಲೂರು ಕಲ್ಪುರ ಸಾಂಸ್ಕೃತಿಕ ಕಲಾಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರಥಮ ಪಿಯುಸಿಯಲ್ಲಿ ಬರುವ ಡಾ. ಚಂದ್ರಶೇಖರ ಕಂಬಾರರ ‘ಬೆಪ್ಪುತಕ್ಕಡಿ ಬೋಳೆ ಶಂಕರ’ ಮತ್ತು ದ್ವಿತೀಯ ಪಿಯುಸಿಯಲ್ಲಿ ಬರುವ ಪೂರ್ಣಚಂದ್ರ ತೇಜಸ್ವಿ ಅವರ ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ ಮಾಡುವ ಮೂಲಕ ಮಕ್ಕಳಿಗೆ ಪಠ್ಯದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಕನ್ನಡ ಪಠ್ಯದಲ್ಲಿರುವ ಇಂತಹ ಕೃತಿಗಳನ್ನು ರಂಗದ ಮೇಲೆ ತಂದು ಮಕ್ಕಳ ಎದುರು ಪ್ರದರ್ಶನ ಮಾಡುವುದರಿಂದ ಅವರ ಅರಿವಿನ ಆಳ ಹೆಚ್ಚುವ ಜತೆಗೆ ರಂಗಭೂಮಿ, ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಾರೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ ಮಾತನಾಡಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ಕನ್ನಡ ಪಠ್ಯ ವಿಭಾಗದಲ್ಲಿ ಅನೇಕ ಸಾಹಿತಿಗಳ ಸಾಹಿತ್ಯವನ್ನು ಜೋಡಿಸಲಾಗಿದೆ. ಕೆಲವು ಸಂದರ್ಭದಲ್ಲಿ ಮಕ್ಕಳಿಗೆ ಇಂತಹ ಪಠ್ಯದ ಬಗ್ಗೆ ಸರಿಯಾಗಿ ಮಾಹಿತಿ ತಲುಪುವುದಿಲ್ಲ. ಪ್ರದರ್ಶನಗಳ ಮೂಲಕ ಮಕ್ಕಳಿಗೆ ಪಠ್ಯದ ಅರ್ಥವನ್ನು ಸುಲಭವಾಗಿ ತಿಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎರಡು ರಂಗ ಸಂಸ್ಥೆಗಳು ಇಂತಹ ಸಾರ್ಥಕ ಪ್ರಯತ್ನಕ್ಕೆ ಕೈಹಾಕಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಸರ್ಫ್ರಾಜ್ ಚಂದ್ರಗುತ್ತಿ, ರವೀಂದ್ರ, ಧರ್ಮಪ್ಪ, ಡಾ. ದೇವೇಂದ್ರಪ್ಪ, ಪ್ರಭಾವತಿ, ಎಲ್.ಎಂ.ಹೆಗಡೆ, ಶರಣ ಶೆಟ್ಟರ್, ಲಕ್ಷ್ಮಣ ಪಿರಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net