

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಮಾರ್ಗದ ರಸ್ತೆ ಬದಿಯ ಕೆರೆಗೆ ಅಡ್ಡಲಾಗಿ ಅಳವಡಿಸಿದ್ದ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರ ಪೈಕಿ ಒಬ್ಬ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ತಾಲೂಕಿನ ಕಾಮಗೆರೆ ಗ್ರಾಮದ ಪವನ್(19)ಮೃತರು. ಈತ ತನ್ನ ಸ್ನೇಹಿತ ವಿಶ್ವ (20) ಎಂಬುವನ ಜತೆ ಸೋಮವಾರ ರಾತ್ರಿ ಕೊಳ್ಳೇಗಾಲದಿಂದ ಕಾಮಗೆರೆ ಗ್ರಾಮದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ. ಈ ವೇಳೆ ಮಧುವನಹಳ್ಳಿ ಬಳಿ ರಸ್ತೆ ಬದಿಯ ಕೆರೆಗೆ ಅಡಲಾಗಿ ಅಳವಡಿಸಿದ್ದ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಬೈಕ್ ಸವಾರರು ಗಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಿದ್ದರು. ಮಧ್ಯರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಪವನ್ ಕೊನೆಯುಸಿರೆಳೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ವಿಶ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ಆಸ್ಪತ್ರೆಗೆ ಪೊಲೀಸರು ತೆರಳಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು.