

ಪಿರಿಯಾಪಟ್ಟಣ: ಈ ಸಾಲಿನ ತಂಬಾಕು ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ರೈತರಿಗೆ ಸಮಾಧಾನಕರ ಬೆಲೆ ದೊರಕುವಂತಾಗಲು ತಂಬಾಕು ಮಂಡಳಿಯ ಅಧಿಕಾರಿಗಳು ಮತ್ತು ಖರೀದಿದಾರರು ಕ್ರಮ ವಹಿಸಬೇಕು ಎಂದು ಸಂಸದ ಯದುವೀರ್ ಹೇಳಿದರು.
ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬುಧವಾರ ತಂಬಾಕು ಹರಾಜಿಗೆ ಚಾಲನೆ ನೀಡಿ ಮಾತನಾಡಿದರು. ತಂಬಾಕು ಬೆಳೆಗೆ ಉತ್ತಮ ಬೆಲೆ ನೀಡಿ ಖರೀದಿಸಲು ಖರೀದಿದಾರ ಕಂಪನಿಗಳಿಗೆ ಅವರದೇ ಆದ ಇತಿಮಿತಿಗಳು ಇರುತ್ತವೆ. ಆದರೆ ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಬೆಲೆ ನೀಡಿ ಖರೀದಿಸುವಂತೆ ನಾನು ಖರೀದಿದಾರ ಕಂಪನಿಗಳಿಗೆ ಮನವಿ ಮಾಡುತ್ತೇನೆ ಎಂದರು.
ಈ ಬಾರಿಯ ಆರಂಭಿಕ ಬಿಡ್‌ನಲ್ಲಿ ನೀಡಿರುವ ಬೆಲೆ ನನಗೆ ವೈಯಕ್ತಿಕವಾಗಿ ತೃಪ್ತಿ ನೀಡಿಲ್ಲ. ರೈತರಿಗೆ ಈ ಬೆಲೆ ಸಮಾಧಾನ ತಂದಿದ್ದರೆ ನನಗೂ ಅದು ಉತ್ತಮ ಬೆಲೆ ಎನಿಸಲಿದೆ ಎಂದು ತಿಳಿಸಿದರು.
ಅಕ್ರಮ ಹಣದ ಉನ್ನತ ತನಿಖೆ ಶೀಘ್ರ: ತಂಬಾಕು ಮಂಡಳಿಯಲ್ಲಿ ರೈತರ ಖಾತೆಯಿಂದ 6 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂಬ ಪ್ರಕರಣದ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣವು ತನಿಖೆಯ ಹಂತದಲ್ಲಿದ್ದು, ಆದಷ್ಟು ಶೀಘ್ರದಲ್ಲಿ ಉನ್ನತ ಮಟ್ಟದ ತನಿಖೆ ಆರಂಭಗೊಳ್ಳಲಿದೆ ಎಂದರು.
ತಂಬಾಕು ಹರಾಜು ಮಾರುಕಟ್ಟೆ ಆವರಣದಲ್ಲಿ ರೈತರಿಗೆ ಮೂಲ ಸೌಲಭ್ಯಗಳ ಕೊರತೆ ಇದೆ ಎಂಬ ಬಗ್ಗೆ ದೂರುಗಳು ಕೇಳಿ ಬಂದಿದ್ದು , ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.
ಮಾರುಕಟ್ಟೆಯಲ್ಲಿನ ರೈತರ ಸಮಸ್ಯೆಗಳು ಮತ್ತು ಖರೀದಿದಾರರ ನಡುವಿನ ದರ ಕುರಿತಾದ ಗೊಂದಲಗಳಿಗೆ ಸಂಬಂಧಪಟ್ಟಂತೆ ಶೀಘ್ರದಲ್ಲೇ ಖರೀದಿದಾರರು, ತಂಬಾಕು ಮಂಡಳಿ ಅಧಿಕಾರಿಗಳು ಮತ್ತು ರೈತರ ಸಭೆ ನಡೆಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ರಾಜೇಂದ್ರ, ಮಾಜಿ ಶಾಸಕ ಎಚ್.ಸಿ.ಬಸವರಾಜ್, ಮುಖಂಡರಾದ ಎಂ.ಎಂ.ರಾಜೇಗೌಡ, ವಿಕ್ರಮ್ ರಾಜ್ ಇತರರು ಇದ್ದರು.