ಹೆಚ್ಚುತ್ತಿದೆ ಅನ್ಯಭಾಷೆಗಳ ಪ್ರಭಾವ

Oplus_131074
ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಸಾವಿತ್ರಿ ಉದ್ಘಾಟಿಸಿದರು. ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ, ಉಪನ್ಯಾಸಕರಾದ ಅರ್ಜುನ್, ಡಾ.ವೀಣಾ, ಪ್ರಿಯಾ ಮುದ್ದಪ್ಪ ಇದ್ದರು.
Published on

ವಿರಾಜಪೇಟೆ : ಪ್ರಸ್ತುತ ಸಮಾಜದಲ್ಲಿ ಕನ್ನಡಿಗರು ಹಾಗೂ ಕನ್ನಡ ಭಾಷೆ ಬಹಳ ತಳಕ್ಕೆ ಇಳಿಯುತ್ತಿದೆ. ಅನ್ನದ ಭಾಷೆಯಾದ ಕನ್ನಡವನ್ನು ತಳಕ್ಕೆ ಇಳಿಸುತ್ತ ನಮ್ಮತನ ಹಾಗೂ ಕನ್ನಡ ಭಾಷೆಯ ಹಿರಿಮೆ ಮಹಿಮೆ ಮರೆಯುತ್ತಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಗೌರವ ಕಾರ್ಯದರ್ಶಿ, ನಿವೃತ್ತ ಶಿಕ್ಷಕಿ ಎಚ್.ಜಿ.ಸಾವಿತ್ರಿ ಬೇಸರ ವ್ಯಕ್ತಪಡಿಸಿದರು.

ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನಲ್ಲಿ ವಿಜಯವಾಣಿ ದಿನಪತ್ರಿಕೆ, ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಗಡಿನಾಡಿನಲ್ಲಿ ಕನ್ನಡದ ಸ್ಥಿತಿಗತಿ’ ವಿಷಯದ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕನ್ನಡಿಗರು ಇಂದು ಕನ್ನಡ ಭಾಷೆಯನ್ನು ಮರೆಯುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಮಾತನಾಡಿದರೆ ಅಂತಹ ವ್ಯಕ್ತಿಗಳಿಗೆ ಜ್ಞಾನದ ಕೊರತೆ ಇದೆ ಎಂಬ ರೀತಿಯಲ್ಲಿ ಸಮಾಜದಲ್ಲಿ ಬಿಂಬಿಸುವಂತಹ ವಾತಾವರಣ ಸೃಷ್ಟಿಯಾಗಿದೆ. ನಾವೆಲ್ಲರೂ ಆದಿ ಕವಿಯಾದ ಪಂಪನನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. ಕವಿ ಪಂಪ ತನ್ನ ಕಾವ್ಯದ ಮೂಲಕ ತನ್ನ ತಾಯಿನಾಡುನ್ನು ಹೊಗಳುವುದರೊಂದಿಗೆ ಮುಂದಿನ ಜನುಮದಲ್ಲಿ ನಾನು ನನ್ನ ತಾಯ್ನಡಿನಲ್ಲಿ ಮನುಷ್ಯನಾಗಿ ಹುಟ್ಟಲು ಸಾಧ್ಯವಾಗದಿದ್ದರೂ ಮರಿ ದುಂಬಿ, ಮರಿ ಕೋಗಿಲೆಯಾಗಿ ಹುಟ್ಟಬೇಕೆಂದು ಬಯಸಿರುವುದಾಗಿ ತಿಳಿಸಿದ್ದಾರೆ. ಇಂತಹ ಭಾವ ಪ್ರತಿಯೊಬ್ಬ ಕನ್ನಡಿಗನಲ್ಲೂ ಇರಬೇಕು. ಭಾವನಾತ್ಮಕ ಪದಪುಂಜ, ವ್ಯಾಕರಣ, ಸಂಧಿ, ಸಮಾಸಗಳಿಂದ ಕೂಡಿದ ಮಧುರವಾದ ಭಾಷೆ ನಮ್ಮದು. ಶಿಕ್ಷಣದಲ್ಲಾಗಲಿ, ಸಾಮಾಜಿಕ ವ್ಯವಸ್ಥೆಯಾಗಲಿ ಕನ್ನಡ ಭಾಷೆಗೆ ಮೊದಲ ಸ್ಥಾನ, ಉಳಿದ ಭಾಷೆಗೆ ನಂತರದ ಸ್ಥಾನವನ್ನು ಕಲ್ಪಿಸಬೇಕು. ಗಡಿನಾಡೇ ಇರಲಿ ಕರುನಾಡೆ ಇರಲಿ... ಕನ್ನಡ ಭಾಷೆಯನ್ನು ಒಪ್ಪಿ, ಅಪ್ಪಿ ಉಳಿಸಿ, ಬೆಳೆಸುವ ಕಾರ್ಯ ಎಲ್ಲರಿಂದಲೂ ಆಗಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಂತ ಅನ್ನಮ್ಮ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಅರ್ಜುನ್ ಮಾತನಾಡಿ, ಗಡಿನಾಡಿನಲ್ಲಿ ಕನ್ನಡದ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಸದ್ಯದ ಮಟ್ಟಿಗೆ ನಮ್ಮ ವಿರಾಜಪೇಟೆ ತಾಲೂಕು ಮಾಕುಟ್ಟ ಹಾಗೂ ಕುಟ್ಟ ಎರಡು ಕಡೆಯಲ್ಲಿ ಕೇರಳ ರಾಜ್ಯವನ್ನು ಸಂಧಿಸುತ್ತದೆ. ತಾಲೂಕಿನಲ್ಲಿರುವ ಜನಸಂಖ್ಯೆಯ ಪ್ರಮಾಣ ಶೇ.21.4ರಷ್ಟು ಮಾತ್ರ ಕನ್ನಡ ಮಾತೃಭಾಷೆಯಾಗಿ ಹೊಂದಿರುವ ಜನರಿದ್ದಾರೆ. ಉಳಿದ ಶೇ.78.6 ದಷ್ಪು ಜನರು ಬೇರೆಬೇರೆ ಮಾತೃಭಾಷೆ ಹೊಂದಿದ್ದಾರೆ. ಇಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಕೇವಲ ಕೆಲವರದ್ದಲ್ಲ. ಕನ್ನಡ ನಾಡಿನಲ್ಲಿರುವ ಪ್ರತಿಯೊಬ್ಬರೂ ಒಗ್ಗೂಡಿ ಮಾಡಬೇಕು. ಜಗತ್ತಿನ 25 ಸುಂದರ ಭಾಷೆಗಳಲ್ಲಿ ಕನ್ನಡವೂ ಒಂದು. ಹೀಗಾಗಿ ಕನ್ನಡಿಗರು ಕನ್ನಡವನು ಹೆಮ್ಮೆಯಿಂದ ಬಳಸುವುದರೊಂದಿಗೆ ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಜವಾಬ್ದಾರಿಯೂ ಕೂಡ ಗಮನಾರ್ಹವಾಗಬೇಕಿದೆ. ಶಿಕ್ಷಣದ ಮಾಧ್ಯಮವಾಗಿರಬಹುದು ಅಥವಾ ಸರ್ಕಾರಿ ಉದ್ಯೋಗಗಳನ್ನು ನೀಡುವ ಸಂದರ್ಭದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಕೊಡಬೇಕು. ಸರ್ಕಾರವು ತನ್ನ ಆಡಳಿತ ಭಾಷೆಯಾಗಿ ಕನ್ನಡವನ್ನು ಮಾತ್ರ ಬಳಸಬೇಕು. ಮನೆ ಮನಗಳಲ್ಲಿ ಕನ್ನಡ ಬಳಕೆಯಾದರೆ ಗಡಿನಾಡಿನಲ್ಲಿ ಕನ್ನಡ ತನ್ನ ಗತವೈಭವದ ಗರಿಮೆ ಮತ್ತೊಮ್ಮೆ ಪಡೆಯಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬೆನಾಡಿಕ್ಟ್ ಆರ್ ಸಲ್ದಾನ ಮಾತನಾಡಿ, ನಮ್ಮ ಮಾತೃಭಾಷೆ ಬೇರೆ ಬೇರೆಯಾದರೂ ಸಾಮಾಜಿಕವಾಗಿ ನಮ್ಮೆಲ್ಲರನ್ನು ಒಗ್ಗೂಡಿಸುವ ಭಾಷೆ ಕನ್ನಡ. ನಮ್ಮ ಮಾತೃಭಾಷೆ ನಮ್ಮ ಮನೆಗಳಿಗೆ ಮೀಸಲಾಗಿರಲಿ, ಕನ್ನಡ ಭಾಷೆಯನ್ನು ನಮ್ಮ ಸಾಮಾಜಿಕ, ವ್ಯವಹಾರಿಕ ಭಾಷೆಯಾಗಿ ನಾವು ಬಳಸೋಣ. ಪ್ರಸ್ತುತ ಸಮಾಜದಲ್ಲಿ ಇತರ ಭಾಷೆಗಳ ಕಲಿಕೆ ಅನಿವಾರ್ಯ. ಹಾಗೆಂದು ಕನ್ನಡ ಭಾಷೆಯನ್ನು ಮರೆಯುವುದು ಸರಿಯಲ್ಲ. ಮಾತೃಭಾಷೆ ನಿರ್ಲಕ್ಷೃ ನಾಡು-ನುಡಿಗೆ ನಾವು ಎಸಗುವ ದೊಡ್ಡದ್ರೋಹ. ಆದ್ದರಿಂದ ಕನ್ನಡವನ್ನು ಹೆಮ್ಮೆಯಿಂದ ಬಳಸುವ, ಬೆಳೆಸುವ ಕಾರ್ಯ ನಮ್ಮೆಲ್ಲರದ್ದಾಗಬೇಕಿದೆ ಎಂದು ಹೇಳಿದರು.

ಕಾಲೇಜಿನ ಉಪ ಪ್ರಾಂಶುಪಾಲೆ ಡಾ.ವೀಣಾ, ಐಕ್ಯೂಎಸಿ ಸಂಯೋಜಕಿ ಪ್ರಿಯಾ ಮುದ್ದಪ್ಪ, ಕನ್ನಡ ವಿಭಾಗದ ಮುಖ್ಯಸ್ಥ ಸುನಿಲ್ ಕುಮಾರ್, ಉಪನ್ಯಾಸಕರಾದ ಕಾವೇರಮ್ಮ, ಅಕ್ಷಿತಾ ನಾಯಕ್, ನಿರ್ಮಿತಾ, ಗುಲ್ನಾರ್ ಬಾನು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net