9ತಿಂಗಳ ಗರ್ಭಿಣಿಗೆ ಸೋಂಕು ದೃಢ

19 CRP 04 (1) (1)
Published on

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿಯ ಗ್ರಾಮವೊಂದರ 9 ತಿಂಗಳ ಗರ್ಭಿಣಿಗೆ ಕರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗರ್ಭಿಣಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದು ಗ್ರಾಮವನ್ನು ಭಾನುವಾರ ಸೀಲ್‌ಡೌನ್ ಮಾಡಲಾಯಿತು.

ಪ್ರಸವ ದಿನ ಸಮೀಪಿಸಿದ್ದರಿಂದ ಜು.16ರಂದು ಮಂಡ್ಯ ಜಿಲ್ಲೆ ಬೆಳ್ಳೂರು ಕ್ರಾಸ್‌ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಗೆ ತೆರಳಿದ್ದ ವೇಳೆ 24 ವರ್ಷದ ಗರ್ಭಿಣಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ನಂತರ ಅವರು ವಾಪಸಾಗಿದ್ದರು.

ಜು.18ರಂದು ಸಂಜೆ ಬಂದ ವರದಿಯಲ್ಲಿ ಕರೊನಾ ದೃಢವಾಗಿತ್ತು. ತೋಟಿ ಗ್ರಾಮದ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಂಕರಲಿಂಗೇಗೌಡ, ಆಶಾ ಕಾರ್ಯಕರ್ತೆ, ಆರೋಗ್ಯ ಇಲಾಖೆ ಸಿಬ್ಬಂದಿ ಶನಿವಾರ ಸೋಂಕಿತಳ ಮನೆಗೆ ತೆರಳಿ ಗರ್ಭಿಣಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು.

ಇತ್ತ ಜಿನ್ನೇನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಸುರೇಶ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಭಾನುವಾರ ಸೋಂಕಿತಳ ಗ್ರಾಮಕ್ಕೆ ಆಗಮಿಸಿ ಮನೆ ಹಾಗೂ ಸಂಪರ್ಕ ಕಲ್ಪಿಸುವ ಬೀದಿಯನ್ನು ಸೀಲ್‌ಡೌನ್ ಮಾಡಿ, ನೂರು ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ವಲಯ ಎಂದು ಘೋಷಿಸಲಾಯಿತು. ಮನೆ ಸುತ್ತ ಹಾಗೂ ಬೀದಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು.

ಪಿಡಿಒ ಸುರೇಶ್, ಆಶಾ ಕಾರ್ಯಕರ್ತೆ ಸುಜಾತಾ, ಆರೋಗ್ಯ ಸಿಬ್ಬಂದಿ ಶುಭಾ, ತಿಮ್ಮೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net