ಗಿನ್ನೆಸ್ ದಾಖಲೆಗೆ ಹಾಕಿ ಉತ್ಸವ ಸೇರ್ಪಡೆ ಕಾರ್ಯ ಶ್ಲಾಘನೀಯ

ಗಿನ್ನೆಸ್ ದಾಖಲೆಗೆ ಹಾಕಿ ಉತ್ಸವ ಸೇರ್ಪಡೆ ಕಾರ್ಯ ಶ್ಲಾಘನೀಯ
Published on

ನಾಪೋಕ್ಲು: 24ನೇ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ವ್ಯವಸ್ಥಿತವಾಗಿ ಆಯೋಜಿಸುವ ಮೂಲಕ ಕುಂಡ್ಯೋಳಂಡ ಕುಟುಂಬಸ್ಥರು ಸಾಧನೆ ಮಾಡಿದ್ದು, ಹಾಕಿ ಉತ್ಸವ ಗಿನ್ನೆಸ್ ದಾಖಲೆಗೆ ಸೇರಲು ಕಾರಣಕರ್ತರಾದ ಕುಂಡ್ಯೋಳಂಡ ಕುಟುಂಬಸ್ಥರ ಕಾರ್ಯ ಶ್ಲಾಘನೀಯ ಎಂದು ಒಲಿಂಪಿಯನ್, ಲೆಫ್ಟಿನಲ್ ಕರ್ನಲ್ ಬಾಳೆಯಡ ಸುಬ್ರಮಣಿ ಹೇಳಿದರು.

ಸಮೀಪದ ಕೊಳಕೇರಿ ಗ್ರಾಮದ ಕುಂಡ್ಯೋಳಂಡ ಕುಟುಂಬಸ್ಥರ ಐನ್‌ಮನೆಯಲ್ಲಿ ಬುಧವಾರ ಆಯೋಜಿಸಿದ್ದ ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಕುಂಡ್ಯೋಳಂಡ ಕುಟುಂಬ ಸಣ್ಣ ಕುಟುಂಬವಾದರೂ ಅವರ ಸಾಧನೆ ದೊಡ್ಡದು. ದೇಶವಿದೇಶಗಳಲ್ಲಿ ಕೌಟುಂಬಿಕ ಹಾಕಿಯ ಖ್ಯಾತಿ ಹಬ್ಬಿರುವುದು ಶ್ಲಾಘನೀಯ. ದೇಶದ ಯಾವುದೇ ಮೂಲೆಗೆ ತೆರಳಿದರೂ ಹಾಕಿ ಉತ್ಸವದ ಮಾತು ಕೇಳಿ ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಮಾತನಾಡಿ, ಪುಟ್ಟ ಜಿಲ್ಲೆ ಕೊಡಗಿನಲ್ಲಿ ಎಲ್ಲ ಸಂಘ-ಸಂಸ್ಥೆಗಳನ್ನು ಜತೆಗೂಡಿಸಿ ಹಾಕಿ ಕೂರ್ಗ್, ಹಾಕಿ ಕರ್ನಾಟಕ, ಹಾಕಿ ಇಂಡಿಯಾ ಸೇರಿದಂತೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವಂತಹ ಕಾರ್ಯ ಮಾಡಿದ ಕುಂಡ್ಯೋಳಂಡ ಕುಟುಂಬಸ್ಥರ ಕಾರ್ಯ ಶ್ಲಾಘನೀಯ. ಇದು ಮುಂದೆ ಹಾಕಿ ಉತ್ಸವ ಆಯೋಜಿಸಲಿರುವ ಕುಟುಂಬಗಳಿಗೂ ಇದು ಮಾರ್ಗದರ್ಶಿ ಎಂದರು.

ಹಾಕಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ ಮಾತನಾಡಿ, ಹಾಕಿ ಉತ್ಸವ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದದ್ದು ಇಡೀ ಕೊಡವ ಜನಾಂಗಕ್ಕೆ ಸಿಕ್ಕ ಗೌರವ ಎಂದರು.

ಹಾಕಿ ಉತ್ಸವದ ಸಂಚಾಲಕ ದಿನೇಶ್ ಮಾತನಾಡಿದರು. ಗಿನ್ನೆಸ್ ದಾಖಲೆ ನಿರ್ಮಿಸಿದ ಕುಂಡ್ಯೋಳಂಡ ಕುಟುಂಬದವರಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹಾಕಿ ಆಟಗಾರರು ವಿಶೇಷ ಶೋ ಹಾಕಿ ಸ್ಟಿಕ್ ನೀಡಿ ಗೌರವ ಸಲ್ಲಿಸಿದರು. ಕುಟುಂಬದ ಪರವಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಟ್ಟೆದಾರ ಸುಬ್ಬಯ್ಯ ಅವರನ್ನು ಅಭಿನಂದಿಸಲಾಯಿತು.

ವಿಶ್ವಕಪ್ ಆಟಗಾರ ಕೂತಂಡ ಪೂಣಚ್ಚ, ಅಂತಾರಾಷ್ಟ್ರೀಯ ಹಾಕಿ ಆಟಗಾರ ಚಂದಪಂಡ ಪ್ರಿನ್ಸ್ ಕರುಂಬಯ್ಯ, ಅಂತಾರಾಷ್ಟ್ರೀಯ ಹಾಕಿ ಆಟಗಾರರಾದ ಕರಿನೆರವಂಡ ಸೋಮಣ್ಣ, ಕುಲ್ಲೆಟೀರ ಉತ್ತಯ್ಯ, ರಾಷ್ಟ್ರೀಯ ಹಾಕಿ ಆಟಗಾರರಾದ ಅರೆಯಡ ರವಿ ಅಯ್ಯಪ್ಪ, ಕರ್ತಮಾಡ ರಿಕ್ಕಿ ಗಣಪತಿ, ಕನ್ನಂಬೀರ ಪ್ರವೀಣ್, ಅಂಜಪರವಂಡ ಕಾರ್ಯಪ್ಪ, ಅಂತಾರಾಷ್ಟ್ರೀಯ ತರಬೇತಿದಾರ ಬೊಳ್ಳೇಪಂಡ ಜೆ.ಕಾರ್ಯಪ್ಪ, ಹೇಮಾ ಪೂವಣ್ಣ, ರಮೇಶ್ ಮುದ್ದಯ್ಯ, ಗಣೇಶ್ ಮುತ್ತಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net