ಜನಿವಾರ ತೆಗೆಸಿದ ಘಟನೆ ಆಕ್ಷೇಪಾರ್ಹ

kmt Dinakar Shetty
Published on

ಕುಮಟಾ: ಶಿವಮೊಗ್ಗ, ಬೀದರ್​ನಲ್ಲಿ ಮತ್ತು ಧಾರವಾಡದಲ್ಲೂ ಸಿಇಟಿ ಪರೀಕ್ಷೆ ವೇಳೆ ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಸಂಗತಿ ಅತ್ಯಂತ ವಿಷಾದನೀಯ ಹಾಗೂ ತೀವ್ರ ಆಕ್ಷೇಪಾರ್ಹವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ವಿವಿಧತೆಯಲ್ಲಿ ಏಕತೆ ಪರಿಕಲ್ಪನೆ ಹೊಂದಿರುವ ನಮ್ಮ ಭಾರತ ದೇಶದಲ್ಲಿ ಬೇರೆ ಬೇರೆ ಸಂಸ್ಕೃತಿ, ಆಚರಣೆ ಮೈಗೂಡಿಸಿಕೊಂಡಿರುವ ಸಮುದಾಯ ಇಲ್ಲಿವೆ. ಸಂವಿಧಾನ ಎಲ್ಲರಿಗೂ ತಮ್ಮ ಧಾರ್ವಿುಕ ನಂಬಿಕೆ, ಆಚರಣೆಯ ಹಕ್ಕು ಕೊಟ್ಟಿದೆ. ಯಾವುದೇ ಸಮಾಜಕ್ಕೂ ಇಂತಹ ಅಪಚಾರ ನಡೆಯಬಾರದು.

ಇತ್ತೀಚಿನ ದಿನಗಳಲ್ಲಿ ರಾಜ್ಯದ ರಾಜಕೀಯ ಸ್ಥಿತಿಗತಿ ನೋಡಿದರೆ ಜನಿವಾರ ಪ್ರಕರಣವೂ ಅತ್ಯಂತ ವ್ಯವಸ್ಥಿತ ಸಂಚಿನ ಭಾಗವೆಂಬಂತೆ ಭಾಸವಾದರೆ ತಪ್ಪಿಲ್ಲ. ಏಕೆಂದರೆ ಇಷ್ಟು ವರ್ಷಗಳ ಕಾಲ ಇಲ್ಲದ ಜನಿವಾರ ಸಮಸ್ಯೆ ಈ ವರ್ಷವೇ ಅಲ್ಲಲ್ಲಿ ನಡೆದಿರುವುದು ಪೂರ್ವಯೋಜಿತವೇ ಎಂಬ ಅನುಮಾನ ಜನರಲ್ಲಿ ಮೂಡುತ್ತಿದೆ.

ಏನೇ ಇದ್ದರೂ ಜನಿವಾರ ತೆಗೆಸಿದ ಪ್ರಕರಣದಿಂದ ಸಂತ್ರಸ್ತರಾದ ವಿದ್ಯಾರ್ಥಿಗಳಿಗೆ ಕಿಂಚಿತ್ತೂ ಅನ್ಯಾಯವಾಗಬಾರದು ಹಾಗೂ ಮುಂದೆಂದೂ ಇಂತಹ ಘಟನೆ ನಡೆಯದಂತೆ ಸರ್ಕಾರ ಪರಿಣಾಮಕಾರಿ ಕ್ರಮಕೈಗೊಳ್ಳಬೇಕು ಎಂದು ಶಾಸಕ ದಿನಕರ ಶೆಟ್ಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net