ಸಂತಾನ ಭಾಗ್ಯ ಕರುಣಿಸುವ ನರೇಗಲ್ಲದ ರತಿ-ಕಾಮ

NRGL RATI KAMA
Published on

ನರೇಗಲ್ಲ: ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿಯ 300 ವರ್ಷಗಳ ಇತಿಹಾಸವಿರುವ ರತಿ-ಕಾಮಣ್ಣರ ಮೂರ್ತಿಯನ್ನು ಸೋಮವಾರವೇ ಪ್ರತಿಷ್ಠಾಪಿಸಲಾಗಿದೆ. ಮಕ್ಕಳಾಗದ ಮಹಿಳೆಯರು ಈ ರತಿ-ಕಾಮ ದೇವರಿಗೆ ಉಡಿ ತುಂಬಿ ಬೇಡಿಕೊಂಡರೆ ವರ್ಷ ತುಂಬುವುದರೊಳಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಸಾವಿರಾರು ಭಕ್ತರು 5 ದಿನಗಳ ಕಾಲ ದಿನಕ್ಕೆರಡು ಬಾರಿ ರತಿ-ಕಾಮರನ್ನು ಪೂಜಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ.

ರತಿ-ಕಾಮರ ಜತೆಗೆ ಇಲ್ಲಿ ಕೂಡಿಸುವ ಇನ್ನಿತರ ಗೊಂಬೆಗಳಿಗೂ 20ರಿಂದ 25 ವರ್ಷಗಳಿಗೊಮ್ಮೆ ಬಣ್ಣ ಹಚ್ಚಲಾಗುತ್ತದೆ. ಶತಮಾನದಷ್ಟು ಹಳೆಯದಾದ ಮೂರ್ತಿಗಳನ್ನು ಈವರೆಗೂ ಬದಲಾವಣೆ ಮಾಡಿಲ್ಲ. ಅವು ಮುಕ್ಕಾಗದಂತೆ ಕಾಪಾಡಿಕೊಂಡು ಬರಲಾಗಿದೆ. ಉಡಿ ತುಂಬಿ ಸಂತಾನ ಭಾಗ್ಯ ಹೊಂದಿರುವ ತಾಯಂದಿರು ರತಿ-ಕಾಮಣ್ಣನಿಗೆ ಸೀರೆ ಬಟ್ಟೆಗಳನ್ನು ಉಡಿಸಿ ಸಂಭ್ರಮಿಸುತ್ತಾರೆ. ಹೀಗೆ ಸಂತಾನ ಹೊಂದಿದ ತಾಯಂದಿರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, ಮೂರ್ತಿಗಳಿಗೆ ಸೀರೆ ಉಡಿಸಲು ಸಂಘಟಕರು ಹೈರಾಣಾಗುತ್ತಿದ್ದಾರೆ. ಕನಿಷ್ಠ ಎಂದರೂ 100 ಸೀರೆಗಳು ಪ್ರತಿನಿತ್ಯ ಬರುತ್ತಿವೆ.

ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಾದ ಜಕ್ಕಲಿ, ಬೂದಿಹಾಳ, ತೋಟಗಂಟಿ, ಮಾರನಬಸರಿ, ಹಾಲಕೆರೆ, ನಿಡಗುಂದಿ ಸೇರಿ ಅನೇಕ ಗ್ರಾಮಗಳಿಂದ ಜನರು ಚಕ್ಕಡಿಗಳನ್ನು ಕಟ್ಟಿಕೊಂಡು ಬಂದು ರತಿ-ಕಾಮರ ದರ್ಶನ ಪಡೆಯುತ್ತಾರೆ. ರಾತ್ರಿ ವಸ್ತಿ ಇದ್ದು, ಗೀಗೀ ಪದಗಳನ್ನು ಕೇಳಿ ಮಾರನೇ ದಿನ ತಮ್ಮ ಊರುಗಳಿಗೆ ತೆರಳುತ್ತಾರೆ.

ನರೇಗಲ್ಲ ಕಾಮಣ್ಣನಿಗೆ ಭಕ್ತರು ಅಪಾರ. ಭಕ್ತಿ-ಭಾವದಿಂದ ನಡೆದುಕೊಂಡವರಿಗೆ ಫಲ ಸಿಗುತ್ತದೆ. ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹೋಳಿ ಬಣ್ಣದ ಆಚರಣೆಯನ್ನು ಮುಂದಿನ ಪೀಳಿಗೆಗೂ ಉಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. | ಡಾ. ಜಿ.ಕೆ. ಕಾಳೆ ಹಿರಿಯ ನಾಗರಿಕರು, ನರೇಗಲ್ಲ ಇದು ನರೇಗಲ್ಲ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ರತಿ ದೇವಿಯನ್ನು ನೋಡಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಲು ದೂರದ ಊರುಗಳಿಂದ ಅನೇಕರು ಆಗಮಿಸಿ ರತಿಗೆ ರೇಷ್ಮೆ ಸೀರೆ ಉಡಿಸಿ, ಆಭರಣ ತೊಡಿಸಿ ಹಣ್ಣು-ಹಂಪಲುಗಳಿಂದ ಉಡಿ ತುಂಬಿ ಸಂಭ್ರಮಿಸುತ್ತಾರೆ. | ಎಂ.ಕೆ. ಬೇವಿನಕಟ್ಟಿ ಹಿರಿಯ ನಾಗರಿಕರು, ನರೇಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net