ನಿಲ್ಲದ ಮಳೆ ಕೊಳೆಯುತ್ತಿದೆ ಬೆಳೆ

SGN KOLE BELE
Published on

ಶಿಗ್ಗಾಂವಿ: ಕಳೆದ ವರ್ಷದ ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಬೆಳೆ ಹಾನಿಗೀಡಾದ ಕಹಿ ನೆನಪು ಮಾಸುವ ಮುನ್ನವೇ ಈ ಬಾರಿಯ ಮುಂಗಾರಿನ ವರ್ಷಧಾರೆಯೂ ರೈತರನ್ನು ಬೆಳೆ ನಷ್ಟದ ಸಂಕಷ್ಟಕ್ಕೆ ಸಿಲುಕಿಸಿದೆ.

ಈ ವರ್ಷ ಅವಧಿಗೂ ಮುನ್ನವೇ ಸುರಿದ ಮುಂಗಾರು ಮಳೆಯಿಂದ ರೈತರು ಹದವರ್ತಿ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ಎರಡ್ಮೂರು ವಾರದ ಬೆಳೆಗಳಿಗೆ ಅತಿಯಾದ ಜಡಿ ಮಳೆಯಿಂದ ಕೀಟ ಬಾಧೆ ವಕ್ಕರಿಸಿದೆ. ಅಲ್ಲದೆ, ಭೂಮಿಯು ಜವಳುಗಟ್ಟಿದ್ದರಿಂದ ತೇವಾಂಶ ಹೆಚ್ಚಾಗಿ ಪಕಳೆ ಬಿಟ್ಟ ಬೆಳೆಗಳೆಲ್ಲ ಕಂದು ಬಣ್ಣಕ್ಕೆ ತಿರುಗುತ್ತಿದೆ. ಇದು ರೈತ ಸಮುದಾಯವನ್ನೇ ಮತ್ತಷ್ಟು ಕಂಗಾಲಾಗಿಸಿದೆ.

ಪ್ರಸಕ್ತ ವರ್ಷದ ಮುಂಗಾರು ಬಿತ್ತನೆ ಉತ್ತಮವಾಗಿತ್ತು. ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಬೆಳೆಗಳೆಲ್ಲ ಕಳಾಹೀನವಾಗಿ ಸ್ಥಿತಿಯಲ್ಲಿದ್ದು, ಕೆಂಬಣ್ಣಕ್ಕೆ ತಿರುಗಿವೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಶಿಗ್ಗಾಂವಿ ಮತ್ತು ಬಂಕಾಪುರ ಹೋಬಳಿ ವ್ಯಾಪ್ತಿಯಲ್ಲಿ ಶೇಂಗಾ, ಸೋಯಾಬೀನ್ ಬೆಳೆಗೆ ಕೀಟಬಾಧೆ ಕಾಣಿಸಿಕೊಂಡಿದೆ. ಎಲೆ ಸುರುಳಿ ರೋಗ ಅಲ್ಲಲ್ಲಿ ಕಂಡು ಬಂದಿದೆ.

ದುಂಡಸಿ ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆ ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗಿದ್ದು, ರೈತರು ಮರುಗುತ್ತಿದ್ದಾರೆ. ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನ ಜೂನ್ ತಿಂಗಳಲ್ಲಿ ಈವರೆಗೆ 201.8 ಎಂ.ಎಂ. ವಾಡಿಕೆ ಮಳೆಗಿಂತ 262.0 ಎಂ.ಎಂ. ಮಳೆಯಾಗುವ ಮೂಲಕ ಶೇ. 30ರಷ್ಟು ಹೆಚ್ಚಾಗಿದೆ. ತಾಲೂಕಿನಲ್ಲಿ ಮೆಕ್ಕೆಜೋಳ, ಶೇಂಗಾ, ಸೋಯಾಬೀನ್, ಭತ್ತ, ಹೆಸರು ಬೆಳೆಗಳು ಬೆಳವಣಿಗೆ ಹಂತದಲ್ಲಿವೆ.

ಹವಾಮಾನ ಇಲಾಖೆಯ ವರದಿಯಂತೆ ಮುಂದೆಯೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ರೈತರು ತ್ವರಿತವಾಗಿ ಹೊಲಗಳಲ್ಲಿ ನಿಲ್ಲುವ ಮಳೆ ನೀರನ್ನು ಬಸಿ ಕಾಲುವೆಗಳಿಂದ ಬಸಿದು ಹೋಗುವಂತೆ ಕ್ರಮ ವಹಿಸಬೇಕು ಎಂದು ಕೃಷಿ ಇಲಾಖೆ ರೈತರಿಗೆ ತಿಳಿವಳಿಕೆ ನೀಡಿದೆ.

ಸಾಲಸೋಲ ಮಾಡಿ ಬಿತ್ತಿದ ಬೆಳೆ ನಿರಂತರ ಮಳೆಯಿಂದಾಗಿ ಬೆಳೆಯುವ ಮೊದಲೇ ಕೊಳೆಯುತ್ತಿದೆ. ಹಿಂದಿನ ಮೂರ್ನಾಲ್ಕು ವರ್ಷಗಳಲ್ಲಿ ಬರಗಾಲ ಹಾಗೂ ಅತಿವೃಷ್ಟಿಯಿಂದ ರೈತ ಕಂಗಾಲಾಗಿದ್ದಾನೆ. ತಕ್ಷಣವೇ ಕೃಷಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ ಹಾಗೂ ಕಂದಾಯ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಹಾನಿಗೀಡಾಗಿರುವ ಬೆಳೆ ವೀಕ್ಷಿಸಿ ಪರಿಹಾರ ಕೊಡಬೇಕಿದೆ. | ಶಿವಾನಂದ ಮ್ಯಾಗೇರಿ ಶಿಗ್ಗಾಂವಿ ರೈತ ನ್ಯಾನೋ ಯೂರಿಯಾ ದ್ರಾವಣವನ್ನು 4 ಮಿಲೀ, ಪೊಟ್ಯಾಷ್ ರಸಗೊಬ್ಬರವನ್ನು 1.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗಳಿಗೆ ಸಿಂಪಡಣೆ ಮಾಡುವುದರಿಂದ ಬೇಗನೆ ಚೇತರಿಸಿಕೊಳ್ಳುತ್ತವೆ. ನ್ಯಾನೋ ಯೂರಿಯಾ ಗೊಬ್ಬರವು ಚಿಕ್ಕಗಾತ್ರದ ಕಣಗಳನ್ನು ಹೊಂದಿದ್ದು, ಗಿಡಕ್ಕೆ ಸಾರಜನಕ ಒದಗಿಸುತ್ತದೆ. | ಕೊಟ್ರೇಶ ಗೆಜ್ಲಿ ಸಹಾಯಕ ನಿರ್ದೇಶಕ ಶಿಗ್ಗಾಂವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net