ಬದುಕಿನಲ್ಲಿ ಪುಸ್ತಕದ ಮಹತ್ವ ದೊಡ್ಡದು: ಸಿಪಿಕೆ

6
Published on

ಮೈಸೂರು: ಬದುಕಿನಲ್ಲಿ ಪುಸ್ತಕ ಸಂಸ್ಕೃತಿ ಬಹುಮುಖ್ಯವಾಗಿದ್ದು, ಮಹತ್ವದ ಪಾತ್ರ ವಹಿಸುತ್ತವೆ. ಆದರೆ, ಇಂದು ಪುಸ್ತಕ ಓದುವುದು ಮರೆಯಾಗಿ ಬೇರೆ, ಬೇರೆ ಮಾಧ್ಯಮಗಳ ಮೊರೆ ಹೋಗುತ್ತಿದ್ದೇವೆ ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್(ಸಿಪಿಕೆ)ವಿಷಾಧಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಕ್ಷರ ನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಅಕ್ಷರ ನಾದ ಪಬ್ಲಿಕೇಷನ್ಸ್‌ನಿಂದ ವಿಜಯನಗರ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕವಿ ಕಾವ್ಯ ಕಥಾ ಸಂಗಮ-ಮೂರನೇ ಆವೃತ್ತಿ ಉದ್ಘಾಟಿಸಿ ಅವರು ಮಾತನಾಡಿದರು.

ಓದುವ ಸಂಸ್ಕೃತಿಯಿಂದ ಸಿಗುವ ಸಂತೋಷ ಬೇರೆ ಮಾಧ್ಯಮದಿಂದ ಸಿಗದು. ಬದುಕಿನಲ್ಲಿ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ. ಹೀಗಾಗಿ ನಮಗೆ ಪುಸ್ತಕಗಳು ಬಹಳ ಮುಖ್ಯ. ಆದರೆ ಪ್ರಸ್ತುತ ಪುಸ್ತಕ ಓದುವ ಸಂಸ್ಕೃತಿ ಮರೆಯಾಗಿ ಬೇರೆ ಬೇರೆ ಮಾಧ್ಯಮಗಳನ್ನು ಗಮನಿಸಲಾಗುತ್ತದೆ ಎಂದರು.

ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಬೇರೆ ಮಾಧ್ಯಮಗಳಲ್ಲಿ ಎಷ್ಟೇ ಮಾಹಿತಿ ತಿಳಿದುಕೊಂಡರೂ, ಪುಸ್ತಕ ಓದಿದಾಗ ಸಿಗುವ ಖುಷಿ, ತೃಪ್ತಿ ಇನ್ನು ಯಾವುದೇ ಮಾಧ್ಯಮದಿಂದ ಸಿಗದೆ. ಹಾಗಾಗಿ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸಾಹಿತ್ಯ ಕೃತಿಗಳು ಹಾಗೂ ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ. ಆದ್ದರಿಂದ ಟಿವಿ, ಮೊಬೈಲ್‌ಬಳಕೆ ಕಡಿಮೆ ಮಾಡಿ, ಪ್ರತಿಯೊಬ್ಬರೂ ಓದುವ ಕಡೆಗೆ ಗಮನ ನೀಡಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಟಿ.ತ್ಯಾಗರಾಜು, ಅಕ್ಷರ ನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ಶ್ರುತಿ ಮಧುಸೂದನ್, ಸಂಪದಸಾಲು ಸಂಪಾದಕ ವೆಂಕಟೇಶ್ ಸಂಪ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ರಾಜ್ಯಾಧ್ಯಕ್ಷೆ ಮಂಜುಳಾ ಪಾವಗಡ, ಲೇಖಕಿ ಪುಷ್ಪಾ ನಾಗತಿಹಳ್ಳಿ, ಬಿ.ಎ.ಪಾರ್ವತಿ, ನೀವಿಯಾ ಗೋಮ್ಸ್, ಮಧುಸೂದನ್ ಆಚಾರ್ ಇತರರು ಇದ್ದರು.

ರಾಜ್ಯಮಟ್ಟದ ಅಕ್ಷರನಾದ ಆದಿಕವಿ ಪಂಪ ಪ್ರಶಸ್ತಿ, ಅಕ್ಷರನಾದ ಹೊನ್ನ ಹೊತ್ತಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಾಜ್ಯದ ವಿವಿಧೆಡೆಯಿಂದ ಸಾಹಿತಿಗಳು ಬಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net