

ಕಾಗವಾಡ: ಯುವ ಜನತೆಯಲ್ಲಿ ರಕ್ತದಾನ ಪ್ರಜ್ಞೆ ಬೆಳೆಸುವುದು ಅಗತ್ಯ ಎಂದು ಪ್ರಾಚಾರ್ಯ ಡಾ.ಎಸ್. ಎ.ಕರ್ಕಿ ಹೇಳಿದರು.
ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ಎನ್‌ಎಸ್‌ಎಸ್,
ಎನ್‌ಸಿಸಿ, ಯೂತ್ ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಮಿರಜನ ಶಾಶ್ವತ ರಕ್ತ ಭಂಡಾರ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ರಕ್ತದಾನದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಮಹಾವಿದ್ಯಾಲಯದ ವಿವಿಧ ಘಟಕಗಳು ಆಯೋಜಿಸಿರುವ ರಕ್ತದಾನ ಶಿಬಿರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕಾರ್ಯದರ್ಶಿ ಪ್ರೊ.ಬಿ.ಎ.ಪಾಟೀಲ ಮಾತನಾಡಿ, ರಕ್ತದಾನದಿಂದ ಆರೋಗ್ಯ ಸುಧಾರಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು. ಎನ್‌ಎಸ್‌ಎಸ್ ಆಯೋಜನಾಧಿಕಾರಿ ಡಾ.ಎ.ಎಂ.ಜಕ್ಕಣ್ಣವರ ಪ್ರಾಸ್ತಾವಿಕ ಮಾತನಾಡಿದರು. ಶಿಬಿರದಲ್ಲಿ ಒಟ್ಟು 60ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಡಿ.ಧಾಮಣ್ಣವರ, ಯೂತ್ ರೆಡ್ ಕ್ರಾಸ್ ಅಧಿಕಾರಿ ಡಾ.ಎ.ಟಿ.ಪಾಟೀಲ, ಎನ್‌ಸಿಸಿ ಅಧಿಕಾರಿ ಪ್ರೊ.ಎ.ಆರ್.ಅಳಗೊಂಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ಪ್ರೊ.ಆರ್.ಎಸ್. ನಾಗರಡ್ಡಿ ಇತರರಿದ್ದರು.