ಕಡಿಮೆಯಾಗದು ಆಯುರ್ವೇದ ಔಷಧ ಮಹತ್ವ

8 lxr 1
Published on

ಲಕ್ಷ್ಮೇಶ್ವರ: ಸನಾತನ ಪರಂಪರೆಯಲ್ಲಿ ಆಯುರ್ವೇದಕ್ಕೆ ಕ್ಲಿಷ್ಟವಾದ ರೋಗ ಗುಣಪಡಿಸುವ ಶಕ್ತಿಯಿದೆ. ಆರೋಗ್ಯ ಕ್ಷೇತ್ರ ಎಷ್ಟೇ ಮುಂದುವರಿದಿದ್ದರೂ ಆಯುರ್ವೇದ ಔಷಧದ ಮಹತ್ವ ಕಡಿಮೆಯಾಗುವುದಿಲ್ಲ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದಲ್ಲಿ 59ನೇ ವರ್ಷದ ಅಸ್ತಮಾ ಯಜ್ಞದ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ನಿತ್ಯ ಜೀವನದಲ್ಲಿ ಆಯುರ್ವೇದ ಮತ್ತು ಸಾಂಪ್ರದಾಯಿಕ ಆಹಾರ ಪದ್ದತಿ ಅಳವಡಿಸಿಕೊಳ್ಳಬೇಕು. ಕಳೆದ 59 ವರ್ಷದಿಂದ ಮೃಗಶಿರಾ ಮಳೆಯ ನಕ್ಷತ್ರದ ವೇಳೆಗೆ ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಔಷಧವನ್ನು ಅಸ್ತಮಾ ರೋಗಿಗಳಿಗೆ ಉಚಿತವಾಗಿ ನೀಡುವ ಮೂಲಕ ಲಕ್ಷಾಂತರ ಜನರನ್ನು ರೋಗದಿಂದ ವಾಸಿ ಮಾಡಿದ ಕೀರ್ತಿ ದಿ. ಬಾಬುರಾವ ಕುಲಕರ್ಣಿಯವರಿಗೆ ಸಲ್ಲುತ್ತದೆ. ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಬಾಬುರಾವ್ ಅವರು ನೀಡುತ್ತಿದ್ದ ಔಷಧ ಪರಿಣಾಮಕಾರಿಯಾಗಲು ಅವರಿಗಿರುವ ಗುರು ರಾಯರ ಕೃಪಾಶೀರ್ವಾದ, ಆಧ್ಯಾತ್ಮಿಕ, ಸಾತ್ವಿಕ ಶಕ್ತಿಯ ಬಲ ಕಾರಣವಾಗಿದೆ. ಔಷಧದ ಶಕ್ತಿಯ ಜತೆಗೆ ಶ್ರದ್ಧೆ, ದೇವರ ಪ್ರಾರ್ಥನೆ ಮತ್ತು ನಂಬಿಕೆ ಮುಖ್ಯವಾಗಿದೆ ಎಂದರು.

ಪ್ರದೀಪ ಅಗ್ನಿಹೋತ್ರಿ ಮಾತನಾಡಿ, ಅಸ್ತಮಾ ರೋಗಕ್ಕೆ ಅಲೋಪಥಿಯಲ್ಲಿ ಸಂಪೂರ್ಣವಾಗಿ ಗುಣಪಡಿಸುವಂತಹ ಔಷಧ ಇಲ್ಲ, ಆದರೆ ಆಯುರ್ವೇದದಲ್ಲಿ ಇದನ್ನು ಗುಣಪಡಿಸಬಹುದಾಗಿದೆ. ರೋಗ ನಿವಾರಣೆಗೆ ಔಷಧದ ಜತೆಗೆ ಪತ್ಯ ಪಾಲಿಸುವುದು ಮುಖ್ಯ. ಐಸ್‌ಕ್ರೀಮ್, ಹಲಸಿನಹಣ್ಣು, ಗಿಣ್ಣ, ಮೊಸರು, ಬಾಳೆ ಮತ್ತು ತಂಬಾಕು ಬಳಸಬಾರದು. ಊಟಕ್ಕೆ ಸಿರಿಧಾನ್ಯ, ಸೊಪ್ಪಿನಪಲ್ಯ ಬಳಸಬೇಕು ಎಂಬ ಕೆಲ ವಿಧಿಗಳನ್ನು ತಿಳಿಸಿದರು.

ಕೃಷ್ಣ ಕುಲಕರ್ಣಿ ಮಾತನಾಡಿ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಪಟ್ಟಣದಲ್ಲಿ ಇದೊಂದು ಪರಂಪರೆಯನ್ನು ಹಾಕಿಕೊಟ್ಟಿರುವ ತಂದೆಯವರಾದ ದಿ.ವೈದ್ಯ ಬಾಬುರಾವ ಕುಲಕರ್ಣಿ ಅವರಿಂದ ಕಲಿತ ಈ ಸೇವೆಯಿಂದ ಆತ್ಮ ಸಂತೃಪ್ತಿ ತಮ್ಮದಾಗಿದೆ ಎಂದರು.

ಪ್ರಕಾಶ ಲಿಂಬಯ್ಯಸ್ವಾಮಿಮಠ ಮಾತನಾಡಿದರು. ಪಲ್ಲಣ್ಣನವರು ಕುಲಕರ್ಣಿ, ಪ್ರಕಾಶ ನಿಂಗಪ್ಪ ಬನ್ನಿ, ಚಂಬಣ್ಣ ಬಾಳಿಕಾಯಿ, ಗೋಪಾಲ ಪಡ್ನೀಸ್, ನಿಂಗಪ್ಪ ತಹಶೀಲ್ದಾರ, ಗುರುರಾಜ ಕುಲಕರ್ಣಿ, ಕೆ.ಆರ್. ದೇಶಪಾಂಡೆ, ನಾಗರಾಜ ಹುಯಿಲಗೋಳ, ನಿಂಗಪ್ಪ ದುರಗಣ್ಣವರ, ವಿಕ್ರಮಾಚಾರ್ಯ ಗಡಗಿ, ಅನಿಲ ಕುಲಕರ್ಣಿ, ನೀಲಪ್ಪ ಪಡಗೇರಿ ಹಾಗೂ ಮಂತ್ರಾಲಯ ಪಾದಯಾತ್ರಾ ಸಂಘದ ಸದಸ್ಯರು ಇತರರಿದ್ದರು. ಕೃಷ್ಣ ಕುಲಕರ್ಣಿ ನಿರೂಪಿಸಿದರು.

4-5 ಸಾವಿರ ಜನ ಆಗಮನ

ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ 4-5 ಸಾವಿರ ಜನ ಸುಡುವ ಬಿಸಿಲಲ್ಲೂ ಪ್ರಾಥಮಿಕ ಶಾಲೆ ನಂ.1 ರ ಆವರಣದಲ್ಲಿ ಶಾಂತರಾಗಿ ಕುಳಿತು ಔಷಧ ಸೇವಿಸಿದರು. ಚಿಕ್ಕೋಡಿಯಿಂದ ಆಗಮಿಸಿದ್ದ ಸಂಜೀವ ಮಡಿವಾಳರ ಅವರು ಕಳೆದ ಮೂರ‌್ನಾಲ್ಕು ವರ್ಷದಿಂದ ಮಗಳಿಗೆ ಔಷಧ ಕೊಡಿಸುತ್ತಿದ್ದು ಆರೋಗ್ಯ ಬಹುತೇಕ ಸುಧಾರಿಸಿದ್ದರಿಂದ ಈ ವರ್ಷ 50 ಜನ ಅಸ್ತಮಾ ಬಾಧಿತರನ್ನು ಕರೆದುಕೊಂಡು ಬಂದಿದ್ದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net