

ಮಂಗಳೂರು: ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ನೇರವಾಗಿ ಹತ್ಯೆ ಮಾಡಿದವರು ಮತ್ತು ಸಂಚು ರೂಪಿಸಿದವರ ಗುರುತು ಪತ್ತೆಯಾಗಿದೆ. ಅವರು ತಲೆಮರೆಸಿಕೊಂಡಿದ್ದು, ಶೀಘ್ರ ಬಂಧಿಸುವುದಾಗಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ದ.ಕ. ಜಿಲ್ಲೆಯಲ್ಲಿನ ಅಹಿತಕರ ಘಟನೆ ಕುರಿತು ನಡೆಯುತ್ತಿರುವ ತನಿಖೆ, ಬಂದೋಬಸ್ತ್ ಹಾಗೂ ಶಾಂತಿ ಸುವ್ಯವಸ್ಥೆ ಕುರಿತಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಪ್ರವೀಣ್ ಹತ್ಯೆ ಪ್ರಕರಣ ಎನ್‌ಐಎಗೆ ಒಂದೆರಡು ದಿನಗಳಲ್ಲಿ ಹಸ್ತಾಂತರವಾಗಲಿದೆ. ಬೆಳ್ಳಾರೆಯಲ್ಲಿ ಎನ್‌ಐಎಯವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಪ್ರಕರಣದ ಆರೋಪಿಗಳನ್ನು ರಾಜ್ಯ ಪೊಲೀಸರೇ ಬಂಧಿಸಲಿದ್ದಾರೆ ಎಂದರು.
ಫಾಜಿಲ್ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಕೊಲೆಗೆ ಕಾರಣ, ಪ್ರಚೋದನೆ ಕುರಿತು ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಲ್ಲಿ ಸಾರ್ವಜನಿಕರು ಹಾಗೂ ಪೊಲೀಸರನ್ನು ಭೇಟಿ ಮಾಡಿ ಧೈರ್ಯ ತುಂಬಲಾಗಿದೆ. ಈಗಿರುವ ರಾತ್ರಿ ಸಂಚಾರ ನಿರ್ಬಂಧವನ್ನು ಹಂತ ಹಂತವಾಗಿ ಸಡಿಲಿಸಲು ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ. ಜಿಲ್ಲೆಯ ಮೂಲೆ ಮೂಲೆಗೂ ಭೇಟಿ ನೀಡುತ್ತಿದ್ದೇನೆ ಎಂದರು.
ಹಳೇ ಪ್ರಕರಣಗಳ ಪರಿಶೀಲನೆ: ತನಿಖೆ ಎಂದರೆ ಬಂಧನ ಮಾತ್ರ ಅಲ್ಲ. ಈ ಹಿಂದಿನ ಬಹಳಷ್ಟು ಘಟನೆಗಳು ಬಂಧನದ ಬಳಿಕ ಸಮರ್ಪಕವಾಗಿ ತನಿಖೆ ಆಗದ ಕಾರಣ ಜಾಮೀನು ಸಿಗುವುದು, ಪ್ರಕರಣ ಖುಲಾಸೆಗೊಳ್ಳುವುದು ನಡೆಯುತ್ತಿದೆ. ಹಾಗಾಗಿ 2015ರ ನಂತರದ ಮತೀಯ ಗಲಭೆ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳು ಎಲ್ಲಿದ್ದಾರೆ? ಅವರ ಮೇಲೆ ಯಾವ ರೀತಿಯ ನಿರ್ಬಂಧಕ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ದೀಪಕ್ ರಾವ್, ಶರತ್ ಮಡಿವಾಳ, ಪಿಂಕಿ ನವಾಜ್, ವಿಟ್ಲದ ಕೊಲೆ ಪ್ರಕರಣಗಳು ಯಾವ ಹಂತದಲ್ಲಿವೆ? ಯಾರಿಂದಲಾದರೂ ಒತ್ತಡ ಇದೆಯೇ? ಸಾಕ್ಷಿಗಳು ಏನು ಹೇಳುತ್ತಾರೆ? ಇಂತಹ ಯಾವುದೇ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಗೊಂಡ ಬಳಿಕ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆಯೇ ಎಂಬುದರ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಎಡಿಜಿಪಿ ತಿಳಿಸಿದರು.
ಸಂಘಟನೆಗಳ ಮೇಲೆ ನಿಗಾ: ಕೆಲವೊಂದು ಸಂಘಟನೆಗಳ ಮೇಲೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಸ್ಥಳೀಯ ಜೈಲುಗಳ ಮೇಲೆಯೂ ನಿಗಾ ವಹಿಸಬೇಕಾಗಿದ್ದು, ಮಂಗಳೂರು ಜೈಲಿಗೂ ಭೇಟಿ ನೀಡಿದ್ದೇನೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ವಹಿಸಬೇಕಾಗಿದೆ. ಕ್ರಿಮಿನಲ್‌ಗಳನ್ನು ಕ್ರಿಮಿನಲ್‌ಗಳಂತೆ ಉಪಚರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
ಸಭೆಯಲ್ಲಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿಗಳಾದ ಅನ್ಶು ಕುಮಾರ್, ದಿನೇಶ್ ಕುಮಾರ್, ದ.ಕ. ಜಿಲ್ಲಾ ಎಸ್ಪಿ ಋಷಿಕೇಶ್ ಸೊನಾವಣೆ, ಉಡುಪಿ ಎಸ್ಪಿ ವಿಷ್ಣುವರ್ಧನ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.