

ನಂಜನಗೂಡು: ಸರ್ಕಾರದಿಂದ ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರ ಜಯಂತಿ ಆಚರಿಸಲಾಗುತ್ತಿದ್ದು, ಇವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ಮಹತ್ವ ಸಿಕ್ಕಂತಾಗುತ್ತದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಅಭಿಪ್ರಾಯಪಟ್ಟರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಅವರು ಪವಿತ್ರ ಗ್ರಂಥವಾದ ರಾಮಾಯಣವನ್ನು ದೇಶಕ್ಕೆ ನೀಡಿದ್ದಾರೆ. ಅವರ ಈ ಕತೆ ಎಲ್ಲರ ಜೀವನದ ಪಾಠವಾಗಿದೆ. ಅವರ ಸಂದೇಶ, ಪಾಠಗಳನ್ನು ಎಲ್ಲರೂ ಅಳವಡಿಸಿಕೊಂಡು ಅವರ ಹಾದಿಯಲ್ಲಿ ಸಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ದಿನಾಂಕ ಸೂಚಿಸಿದ ನಂತರ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಿಸಲಾಗುವುದು ಎಂದರು.
ಮುಖ್ಯ ಭಾಷಣಕಾರ ಬಸವ ಯೋಗೀಶ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಭಾರತೀಯ ಸಾಹಿತ್ಯ ಇತಿಹಾಸದಲ್ಲಿ ರಚಿಸಿರುವ ರಾಮಾಯಣ ಅಜರಾಮರವಾಗಿದೆ ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಕಾಸನೂರು, ತಾಲೂಕು ಪಂಚಾಯಿತಿ ಇಒ ಜೆರಾಲ್ಡ್ ರಾಜೇಶ್, ಕುರಹಟ್ಟಿ ಮಹೇಶ್, ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ವಾಲ್ಮೀಕಿ ಸಂಘದ ಅಧ್ಯಕ್ಷ ಕೆ.ನಾಗರಾಜು, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಶಿವಣ್ಣ, ದೊರೆಸ್ವಾಮಿ ನಾಯಕ, ಶ್ರೀಕಂಠ ನಾಯಕ, ಶಿವನಂಜ ನಾಯಕ, ಮಲ್ಲಹಳ್ಳಿ ನಾರಾಯಣ ಇತರರು ಇದ್ದರು.