ಸಂವಿಧಾನ ಬದಲಾವಣೆ ಚಿಂತನೆ ಕಾಂಗ್ರೆಸಿನದ್ದಲ್ಲ

ex minister kimmane ratnakar
ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್
Published on

ಶಿವಮೊಗ್ಗ: ಸಂವಿಧಾನವನ್ನು ಬದಲಾವಣೆ ಮಾಡುವ ಚಿಂತನೆ ಆರ್‌ಎಸ್‌ಎಸ್(ರಾಷ್ಟ್ರೀಯ ಸ್ವಯಂಸೇವಕ ಸಂಘ) ಮತ್ತು ಬಿಜೆಪಿಯದ್ದು ಹೊರತು ಕಾಂಗ್ರೆಸ್‌ನದ್ದಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್ ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂವಿಧಾನ ಬದಲಾವಣೆ ಮಾಡುತ್ತೇನೆಂದು ಹೇಳಿಲ್ಲ. ಹಾಗೆ ಹೇಳಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಆದರೂ ಬಿಜೆಪಿಯವರು ಸಣ್ಣ ಎಳೆಯನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ತೀರ್ಥಹಳ್ಳಿ ಸೇರಿ ಅನೇಕ ಕಡೆ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಿ ಪ್ರತಿಭಟಿಸುತ್ತಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಂವಿಧಾನದ ಬಗ್ಗೆ ಅರಿವಿಲ್ಲ. ಅವರು ಮೊದಲು ಆರ್‌ಎಸ್‌ಎಸ್‌ನ ಚಿಂತನಾಗಂಗಾ ಪುಸ್ತಕ ಓದಬೇಕು. ಆನಂತರ ಮಾತನಾಡಬೇಕು. ಏಕಾತ್ಮಕ ಸರ್ಕಾರದ ಪದ್ಧತಿ ಸ್ಥಾಪಿಸುವಂತೆ ಸಂವಿಧಾನವನ್ನು ಪುನಃ ಬರೆದಿದ್ದು, ಯಾರ ಪ್ರತಿಕೃತಿ ದಹಿಸಬೇಕು ಎಂಬುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕು. ರಾಜ್ಯಗಳ ಅಸ್ತಿತ್ವವನ್ನೇ ಕಸಿದುಕೊಂಡಿರುವ ಸಂವಿಧಾನವನ್ನು ಬದಲಾಯಿಸಬೇಕೆಂಬ ಮಾತುಗಳನ್ನು ಬಿಜೆಪಿಯವರೇ ಆಡುತ್ತಿರುವಾಗ ಪ್ರತಿಕೃತಿ ದಹನ ಡಿ.ಕೆ.ಶಿವಕುಮಾರ್ ಅವರದ್ದಲ್ಲ. ಚಿಂಥನಾಗಂಗಾದಂತಹ ಪುಸ್ತಕಗಳು ಮತ್ತು ಅದರ ಹಿಂದಿರುವ ಮನಸ್ಸುಗಳದ್ದಾಗ ಬೇಕಿದೆ ಎಂದರು.

ಬಿಜೆಪಿಯವರಿಗೆ ರಾಷ್ಟ್ರೀಯತೆ ಕಲ್ಪನೆಯೇ ಬೇರೆಯಾಗಿದೆ. ಆರ್‌ಎಸ್‌ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜವನ್ನೇ ಹಾರಿಸದವರು ಅವರು. ಹಿಂದು ಧರ್ಮವನ್ನು ಉಳಿಸಬೇಕೆಂಬುದು ನಮ್ಮೆಲ್ಲರ ಆಸೆ. ಆದರೆ ಅದೇ ಧರ್ಮವನ್ನು ರಸ್ತೆ ಮೇಲೆ ತೆಗೆದುಕೊಂಡು ಹೋಗಬೇಕಾದ ಅಗತ್ಯವಿಲ್ಲ. ನಮ್ಮ ನಮ್ಮ ಮನೆ, ಮನಗಳಲ್ಲಿ ಆಚರಿಸಬೇಕು. ಬಿಜೆಪಿಯನ್ನು ನಾವು ವ್ಯಕ್ತಿಗತವಾಗಿ ವಿರೋಧಿಸುತ್ತಿಲ್ಲ. ಅವರ ಸಿದ್ಧಾಂತಗಳನ್ನು ವಿರೋಧಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ಹುಂಚನಕಟ್ಟೆ ಆದರ್ಶ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net