ಪತ್ನಿಯ ಕತ್ತು ಕಡಿದು ಕುಣಿದು ಕುಪ್ಪಳಿಸಿದ ಪತಿ..!

Udp_Basrur death
Published on

ಉಡುಪಿ: ಪತ್ನಿಯ ಕತ್ತನ್ನು ಕತ್ತಿಯಿಂದ ಕಡಿದು ಪತಿಯೋರ್ವ ಕುಣಿದು ಕುಪ್ಪಳಿಸಿ, ಸಂಭ್ರಮಿಸಿದ ಘಟನೆ ಕುಂದಾಪುರ ತಾಲೂಕಿನ ಕಂಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ರೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.

ಲಕ್ಷ್ಮಣ ಯಾನೆ ರಮೇಶ್ (40) ಎಂಬಾತ ಕಂಠಪೂರ್ತಿ ಕುಡಿದು ಬಂದು ಕತ್ತಿಯಿಂದ ಪತ್ನಿ ಅನಿತಾ (38)ಳ ಕುತ್ತಿಗೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ಪತ್ನಿಯನ್ನು ಅಡುಗೆ ಮನೆಯಲ್ಲಿ ಕೂಡಿ ಹಾಕಿ ಬಳಿಕ ಮನೆಯ ಹಾಲ್‌ಗೆ ಬಂದು ಕತ್ತಿ ಹಿಡಿದು ವಿಚಿತ್ರವಾಗಿ ನೃತ್ಯ ವಾಡಿ ಅಟ್ಟಹಾಸ ಮೆರೆದಿದ್ದಾನೆ. ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ

ಬಸ್ರೂರು ಕಾಶಿ ಮಠಕ್ಕೆ ಸಂಬಂಧಿಸಿದ ರೆಸಿಡೆನ್ಸಿಯಲ್ ಬ್ಲಾಕ್‌ನ ಬಾಡಿಗೆ ಮನೆಯ ಒಂದನೇ ಮನೆಯಲ್ಲಿ ಸೊರಬ ಮೂಲದ ಲಕ್ಷ್ಮಣ ಹಾಗೂ ಅನಿತಾ ದಂಪತಿ ವಾಸಿಸುತ್ತಿದ್ದರು. ಕಾಶಿ ಮಠದ ತೋಟ ನೋಡಿಕೊಳ್ಳಲೆಂದು ಅವರು 4 ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದರು. ಶನಿವಾರ ರಾತ್ರಿ ಸುವಾರು 9 ಗಂಟೆೆಗೆ ಗಂಡ-ಹೆಂಡತಿ ನಡುವೆ ಗಲಾಟೆ ನಡೆದು ಕುಡಿದ ಮತ್ತಿನಲ್ಲಿದ್ದ ಆತ, ಪತ್ನಿಯ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ವಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಆಕೆ, ಮನೆಯ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಳು. ಕಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶ್ರುವಾಯು ಪ್ರಯೋಗ

ಮನೆಯ ಬಾಗಿಲಿನ ಚಿಲಕ ಹಾಕಿಕೊಂಡ ಲಕ್ಷ್ಮಣ, ಕತ್ತಿ ಹಿಡಿದು ಕುಣಿಯುತ್ತಿದ್ದುದನ್ನು ಸ್ಥಳೀಯರು ನೋಡಿದ್ದಾರೆ. ತಕ್ಷಣ ಮನೆಯ ಕಿಟಕಿ ಒಡೆದು ಅಡುಗೆ ಕೋಣೆಗೆ ನುಗ್ಗಿದ ಜನರು, ಗಂಭೀರ ಸ್ಥಿತಿಯಲ್ಲಿದ್ದ ಅನಿತಾಳನ್ನು ಹೊರತಂದು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಪತಿರಾಯ ಮಾತ್ರ ದೆವ್ವ ಮೈಮೇಲೆ ಬಂದವನಂತೆ ಕತ್ತಿ ಹಿಡಿದು ಕುಣಿಯುತ್ತಲೇ ಇದ್ದ. ಮಾಹಿತಿ ತಿಳಿದ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಮನೆಯೊಳಗೆ ಅಶ್ರುವಾಯು ಪ್ರಯೋಗಿಸಿ ಒಂದೂವರೆ ಗಂಟೆಗಳ ನಂತರ ಆರೋಪಿ ಪತಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net