ಕೊಡಲಿಯಿಂದ ಹಲ್ಲೆ ನಡೆಸಿ ಪತ್ನಿ ಕೊಲೆಗೆ ಯತ್ನಿಸಿದ ಪತಿ

SRP_29-01
Published on

ಶ್ರೀರಂಗಪಟ್ಟಣ: ಪತ್ನಿಯ ಶೀಲ ಶಂಕಿಸಿದ ಪತಿ ಕೊಡಲಿಯಿಂದ ಆಕೆಗೆ ಮನಬಂದಂತೆ ಕೊಚ್ಚಿ ಕೊಲೆಗೆ ಯತ್ನಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ನಗುವನಹಳ್ಳಿ ಕಾಲನಿಯಲ್ಲಿ ಏ.10ರ ಮಧ್ಯೆರಾತ್ರಿ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ಪ್ರಸನ್ನ (40) ಎಂಬಾತ ತನ್ನ ಪತ್ನಿ ರೂಪಶ್ರೀ(29)ಗೆ ಆಹಾರದಲ್ಲಿ ಮತ್ತು ಬರುವ ಔಷಧ ನೀಡಿ ಮಲಗಿದ್ದ ವೇಳೆ ಆಕೆಯ ಎರಡು ಕಾಲುಗಳನ್ನು ಕೊಡಲಿಯಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.


ಘಟನೆ ವಿವರ: ಕೆ.ಆರ್.ಪೇಟೆ ತಾಲೂಕಿನ ಬಸವನಹಳ್ಳಿ ಗ್ರಾಮದ ರೂಪಶ್ರೀ ನಗುವನಹಳ್ಳಿ ಕಾಲನಿ ಗ್ರಾಮದ ನಿವಾಸಿ ಪ್ರಸನ್ನನೊಂದಿಗೆ 8 ವರ್ಷಗಳ ಹಿಂದೆ ವಿವಾಹವಾಗಿದ್ದು, ವಿವಾಹವಾದ ಕೆಲ ವರ್ಷಗಳ ಕಾಲ ಅನ್ಯೋನ್ಯವಾಗಿದ್ದ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ದಂಪತಿ ನಡುವೆ ಹಣಕ್ಕಾಗಿ ಜಗಳ ಏರ್ಪಟ್ಟು ಪತ್ನಿಯನ್ನು ಅನುಮಾನಿಸಲು ಶುರುಮಾಡಿದ್ದು, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಕಾರಣ ಆಕೆ ಮಕ್ಕಳೊಂದಿಗೆ ತನ್ನ ತವರು ಮನೆಗೆ ತೆರಳಿದ್ದಳು.


ಈ ಬಗ್ಗೆ ಎರಡು ಕುಟುಂಬಗಳ ಸದಸ್ಯರು ಹಾಗೂ ಗ್ರಾಮದ ಮುಖಂಡರ ನೇತೃತ್ವದಲ್ಲಿ ನ್ಯಾಯ ಪಂಚಾಯಿತಿ ಮಾಡಿ ಬುದ್ಧಿ ಹೇಳಲಾಗಿತ್ತು. ಪತಿ ಪ್ರಸನ್ನ ಯಾವುದೇ ಕೆಲಸ ಕಾರ್ಯಕ್ಕೆ ತೆರಳದ ಹಿನ್ನೆಲೆ ಜೀವನ ನಿರ್ವಹಣೆಗೆ ಆಕೆಯೇ ಮೈಸೂರಿನ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಇಷ್ಟಾದರೂ ಆಕೆಯ ಮೇಲೆ ಸಂಶಯ ಬಿಡದ ಪತಿ ಸಾಕಷ್ಟು ಭಾರಿ ಇದೇ ವಿಚಾರಕ್ಕೆ ಜಗಳ ಮಾಡಿ ಕೆಲಸ ಬಿಡುವಂತೆ ತಾಕೀತು ಮಾಡಿದ್ದನು. ಯುಗಾದಿ ಹಬ್ಬಕ್ಕೆ ತವರೂರಿಗೆ ಆಗಮಿಸಿದ್ದ ಪತ್ನಿಯನ್ನು ಪ್ರಸನ್ನ ಬದಲಾದವನಂತೆ ವರ್ತಿಸಿ ಪುನಃ ತಾಲೂಕಿನ ಗ್ರಾಮಕ್ಕೆ ಕರೆತಂದು ಮನೆಯಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡಿ ಮಲಗಿದ್ದಾರೆ. ಆದರೆ ಪತ್ನಿಗೆ ಊಟದಲ್ಲಿ ಎಚ್ಚರ ತಪ್ಪಿಸುವ ಔಷಧ ಹಾಕಿದ್ದ ಪತಿ ನಿದ್ರೆಯಲ್ಲಿ ಮಲಗಿದ್ದ ಆಕೆಯ ಮೇಲೆ ಮಧ್ಯರಾತ್ರಿ ಮನಬಂದಂತೆ ಕೊಡಲಿಯಿಂದ ಭೀಕರವಾಗಿ ಕೊಚ್ಚಿ ಗಂಭೀರ ಗಾಯಗೊಳಿಸಿದ್ದಾನೆ. ಈ ವೇಳೆ ನೋವಿಂದ ಚೀರಾಡಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಗೆ ಅತ್ತೆ ಮಂಚಮ್ಮ ಹಾಗೂ ಅಕ್ಕಪಕ್ಕದ ನಿವಾಸಿಗಳು ಸಹಾಯಕ್ಕೆ ಧಾವಿಸಿ ತುರ್ತು ಆಸ್ಪತ್ರೆ ಸೇರಿಸಿದ್ದಾರೆ. ಆರೋಪಿ ಪತಿ ಪ್ರಸನ್ನ ತಲೆಮರೆಸಿಕೊಂಡಿದ್ದಾನೆ.


ರೂಪಶ್ರೀ ಪಾಲಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ನಡೆದು 20 ದಿನಗಳು ಕಳೆದರೂ ಈವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರ ಎದುರೇ ನೋವು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net