ಹಾಡಹಗಲೇ ಮನೆ ಬೀಗ ಒಡೆದು ಕಳವು

30 mlv 4
Published on

ಮಳವಳ್ಳಿ: ತಾಲೂಕಿನ ತಳಗವಾದಿ ಗ್ರಾಮದಲ್ಲಿ ಗುರುವಾರ ಹಾಡಹಗಲೇ ಮನೆಯ ಬಾಗಿಲ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.


ಗ್ರಾಮದ ಲೇ.ಕೆ.ಚೌಡಯ್ಯ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಅವರ ಪುತ್ರ ದಿಲೀಪ್‌ಕುಮಾರ್ ವಿವಾಹ ಸಮಾರಂಭ ಮಂಡ್ಯ ನಗರದಲ್ಲಿದ್ದ ಹಿನ್ನೆಲೆಯಲ್ಲಿ ಕುಟುಂಬದವರೆಲ್ಲ ಅಲ್ಲಿಗೆ ತೆರಳಿದ್ದರು. ಮನೆಯ ಹಿಂಬಾಗಿಲನ್ನು ಖದೀಮರು ಕಬ್ಬಿಣದ ರಾಡ್ ಬಳಸಿ ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ.


ಕೋಣೆಯೊಂದರಲ್ಲಿದ್ದ ಬೀರುವಿನ ಬೀಗ ಒಡೆದು ಲಾಕರ್‌ನಲ್ಲಿ ಇಟ್ಟಿದ್ದ ಸುಮಾರು 80 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ರೂ. ನಗದು ದೋಚಿದ್ದಾರೆ. ವಿವಾಹ ಕಾರ್ಯಕ್ರಮ ಮುಗಿಸಿ ಸಂಜೆ ಮನೆಗೆ ಬಂದ ಕುಟುಂಬದವರಿಗೆ ಕಳ್ಳತನವಾಗಿರುವುದು ಗೊತ್ತಾಗಿದೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಿ ಪರಿಶೀಲನೆ ನಡೆಸಲಾಯಿತು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net