

ಇಳಕಲ್ಲ: ಇಳಕಲ್ಲ ನಗರಸಭೆ ಮುಂಭಾಗದಲ್ಲಿರುವ ಡಾ.ಬಿ. ಆರ್.ಅಂಬೇಡ್ಕರ್ ಭವನವನ್ನು ಡಾ ಬಾಬಾಸಾಹೇಬ್ ಅಂಬೇಡ್ಕರ್ ಸೇವಾ ಸಮಿತಿಗೆ ಗುರುವಾರ ಮರಳಿಸಲಾಗಿದೆ.
ಪೊಲೀಸ್ ಬಂದೋಬಸ್ತ್‌ನೊಂದಿಗೆ ಅ.25 ರಂದು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಭವನವನ್ನು ನಗರಸಭೆ ಸುಪರ್ದಿಗೆ ಪಡೆಯಲಾಗಿತ್ತು. ಅಧಿಕಾರಿಗಳ ಕಾರ್ಯವೈಖರಿ ಪ್ರಶ್ನಿಸಿ ಸಮಿತಿಯವರು ಕೋರ್ಟ್ ಮೆಟ್ಟಿಲು ಏರಿದ್ದರು. ಭವನವನ್ನು ಬಾಬಾಸಾಹೇಬ್ ಅಂಬೇಡ್ಕರ್ ಸೇವಾ ಸಮಿತಿಗೆ ಮರಳಿಸುವಂತೆ ಧಾರವಾಡ ಹೈಕೋರ್ಟ್ ಪೀಠ ಅ. 30 ರಂದು ಆದೇಶಿಸಿತ್ತು. ಕೋರ್ಟ್ ಆದೇಶಕ್ಕೆ ನಗರಸಭೆ ಮನ್ನಣೆ ನೀಡಿರಲಿಲ್ಲ.
ಹೈಕೋಟ್ ಪೀಠ ಗುರುವಾರ ಮತ್ತೆ ಆದೇಶ ನೀಡಿದ್ದರಿಂದ ಸಂಜೆ 5 ಕ್ಕೆ ಇಳಕಲ್ಲ ನಗರಸಭೆ ಮ್ಯಾನೇಜರ್ ಚೆನ್ನಪ್ಪ ಗೌಡರ ಹಾಗೂ ಆರ್‌ಐ ಪರಶುರಾಮ ನಾರಾಯಣಿ ಹಾಗೂ ಮಂಜುನಾಥ ಗುಡಿಮನಿ ಅವರು ಭವನದ ಬೀಗ ತೆಗೆದು ಸಮಿತಿಗೆ ಹಸ್ತಾಂತರಿಸಿದರು. ಪರಿಶಿಷ್ಟ ಸಮುದಾಯದ ಹಿರಿಯರು, ಯುವಕರು, ಮಹಿಳೆಯರು ಸಿಹಿ ಹಂಚಿ ಸಂಭ್ರಮಿಸಿದರು.
ಇಳಕಲ್ಲ ನಗರಸಭೆ ಮಾಜಿ ಅಧ್ಯಕ್ಷೆ ಶೋಭಾ ಅಮದಿಹಾಳ ಮಾತನಾಡಿ, ನಗರಸಭೆ ಅಧಿಕಾರಿಗಳು ನಮಗೆ ಏನೂ ಹೇಳದೆ, ನೋಟಿಸ್ ನೀಡದೆ ಏಕಾಏಕಿ ಭವನಕ್ಕೆ ಬೀಗ ಹಾಕಿದ್ದರು. ಈಗ ಸಮುದಾಯ ಭವನ ಬೀಗ ತೆಗೆದಿದ್ದು ತುಂಬ ಸಂತೋಷವಾಗಿದೆ. ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದರು.
ನಗರಸಭೆ ಮಾಜಿ ಸದಸ್ಯ ಮಂಜುನಾಥ್ ಹೊಸಮನಿ, ಸಮಾಜದ ಹಿರಿಯರಾದ ಮಹಾದೇವ ಕಂಬಾಗಿ, ಗಿರೀಶ ಅಚನೂರ, ಸ್ಯಾಮ್ ಮುಧೋಳ, ಶರಣಪ್ಪ ಚಲವಾದಿ, ಮಹಾಂತೇಶ ನಾರಾಯಣಿ, ನಾಗೇಶ ಮುದಗಲ್, ಚಂದಪ್ಪ ಚಲವಾದಿ, ಶಿವು ಚಲವಾದಿ, ಸಾವಿತ್ರಿ ನಾಮದೇವ ಕೋಟೆಗಾರ, ಸಿದ್ದಮ್ಮ ಕೋಟೆಗಾರ, ಸವಿತಾ ಅಶೋಕ ಚಲವಾದಿ, ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ ಗುರಂ, ಸೂಗುರೇಶ್ ನಾಗಲೋಟಿ, ಉಮೇಶ ಕೊಂಗಾರಿ, ಮಹಾಂತೇಶ್ ಮಠ, ವಿರೇಶ ಹಿರೇಮನಿ ಇದ್ದರು.